ಬೆಂಗಳೂರು:ಕರಾವಳಿ ಕರ್ನಾಟಕದಲ್ಲಿ ಮುಂಗಾರು ಅಬ್ಬರ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಹವಾಮಾನ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಇಂದೂ ಸೇರಿದಂತೆ ನಾಲ್ಕು ದಿನ ಆರೆಂಜ್ ಅಲರ್ಟ್ ಮತ್ತು ಜುಲೈ 8ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಇಂದು ಮತ್ತು ಜುಲೈ 6, 7ರಂದು ಆರೆಂಜ್, ನಾಳೆ ಮತ್ತು ಜುಲೈ 8ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಕೊಡಗು ಜಿಲ್ಲೆಗೆ ಇಂದಿನಿಂದ ಮೂರು ದಿನ ಮತ್ತು ಜುಲೈ 8ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಜಿಲ್ಲೆಗೆ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಚದುರಿದ ಮಳೆಯಾಗಲಿದ್ದು, ಗಾಳಿಯ ವೇಗ ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ಇರಲಿದೆ. ಕೊಡಗು ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗುಸಹಿತ ಮಳೆಯಾಗಲಿದೆ. ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಳಿಸಹಿತ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಕರ್ನಾಟಕದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ ಸಾಧಾರಣ ಮಳೆ ಬೀಳಲಿದೆ. ಉತ್ತರ ಕರ್ನಾಟಕದಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆ ಬೀಳಲಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಡಿಗ್ರಿ ಮತ್ತು 21 ಡಿಗ್ರಿ ದಾಖಲಾಗಲಿದೆ.
ಆಗುಂಬೆಯಲ್ಲಿ ಅತಿ ಹೆಚ್ಚು ಮಳೆ:ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ನಿನ್ನೆಯಿಂದ ಅತ್ಯಧಿಕ ಮಳೆ (25 ಸೆ.ಮೀ) ಬಿದ್ದಿದೆ. ಉಳಿದಂತೆ, ಅತಿ ಹೆಚ್ಚು ಮಳೆ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪದಲ್ಲಿ 24 ಸೆ.ಮೀ, ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ 23 ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿಯಲ್ಲಿ 20 ಸೆ.ಮೀ ಮಳೆಯಾಗಿದೆ.
"ನೈಋತ್ಯ ಮಾನ್ಸೂನ್ ಕರಾವಳಿ ಕರ್ನಾಟಕದ ಮೇಲೆ ಸಕ್ರಿಯವಾಗಿದೆ. ರಾಜ್ಯದ ಒಳಭಾಗದಲ್ಲಿ ಸಾಮಾನ್ಯವಾಗಿದೆ. ಇಂದು ಕರಾವಳಿಯ ಬಹುತೇಕ ಕಡೆಗಳು, ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ" ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಪುವಿಯರಸನ್ ಹೇಳಿದ್ದಾರೆ.
ಇದನ್ನೂ ಓದಿ:ಉಡುಪಿ ಜಿಲ್ಲೆಯಾದ್ಯಂತ ಮಳೆಯೋ ಮಳೆ: ಕಮಲಶಿಲೆ, ಮಾರಣಕಟ್ಟೆ ದೇಗುಲಕ್ಕೆ ಜಲ ದಿಗ್ಬಂಧನ - Udupi Rain