ಬೆಂಗಳೂರು : ಅಬಕಾರಿ ಇಲಾಖೆ, ಅಬಕಾರಿ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ವಿಚಾರದಲ್ಲಿ ಮದ್ಯ ಮಾರಾಟಗಾರರ ಸಂಘದಲ್ಲೇ ಪರ, ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿವೆ.
ಅಬಕಾರಿ ಇಲಾಖೆ, ಅಬಕಾರಿ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ವಿಚಾರ ಹಾಗೂ ನವೆಂಬರ್ 20 ರಂದು ಮದ್ಯ ಮಾರಾಟ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಇಂದು ವಿಧಾನಸೌಧದಲ್ಲಿ ಹಣಕಾಸು ಇಲಾಖೆ ಎಸಿಎಸ್ ಎಲ್. ಕೆ ಅತೀಕ್ ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ. ಸಿ ಜಾಫರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯ ಮದ್ಯ ಮಾರಾಟಗಾರರ ಸಂಘದ ಒಕ್ಕೂಟದ ಅಧ್ಯಕ್ಷ ಗುರುಸ್ವಾಮಿ ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ನವೆಂಬರ್ 20ರಂದು ಮದ್ಯದಂಗಡಿಗಳ ಬಂದ್‌ಗೆ ಒಂದೆಡೆ ಬೆಂಬಲ ನೀಡುವುದಾಗಿ ಹೇಳಿದರೆ, ಇನ್ನೊಂದೆಡೆ ವಿರೋಧ ವ್ಯಕ್ತವಾಗಿದೆ. ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಮತ್ತು ಬೆಂಗಳೂರು, ಮೈಸೂರು, ಶಿವಮೊಗ್ಗ ವಿಭಾಗದ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ನಿಂದಲೂ ಇಂದು ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಲು ಆಗಮಿಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ.
ಸಭೆ ನಂತರ ಮಾಧ್ಯಮಗಳ ಜೊತೆ ರಾಜ್ಯ ಮದ್ಯ ಮಾರಾಟಗಾರರ ಸಂಘದ ಒಕ್ಕೂಟದ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ''ಮದ್ಯ ಮಾರಾಟಗಾರರ ಸಂಘದಿಂದ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಭ್ರಷ್ಟಾಚಾರದ ವಿಚಾರಗಳನ್ನೂ ಗಮನಕ್ಕೆ ತಂದಿದ್ದೇವೆ. ಹಣಕಾಸು ಇಲಾಖೆ ಎಸಿಎಸ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಅದಾದ ಬಳಿಕ ಸಿಎಂ ಜೊತೆ ಸಭೆ ಮಾಡಿ ಸರ್ಕಾರ ತೀರ್ಮಾನ ಮಾಡಲಿದೆ'' ಎಂದರು.