ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವರದಿಯನ್ನು ಅವರ ಪರ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜಾಮೀನು ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದರು. ಈ ವರದಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಪಿ.ಪ್ರಸನ್ನಕುಮಾರ್ ಅವರಿಗೆ ಸೂಚನೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ ವೇಳೆ ಎಸ್‌ಪಿಪಿ ವಾದ ಮಂಡಿಸಿ, ''ಪ್ರಕರಣ ಸಂಬಂಧ ಹೆಚ್ಚುವರಿ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಈ ಸಂಬಂಧ ನ್ಯಾಯಾಲಯ ವಿಚಾರಣೆ ಆರಂಭಿಸಲಿದೆ'' ಎಂದು ತಿಳಿಸಿದರು. ''ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ವರದಿ ನಮ್ಮ ಕೈಸೇರಿಲ್ಲ. ಈ ಹಿಂದೆ ನಡೆದ ವಿಚಾರಣೆ ವೇಳೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಅರ್ಜಿದಾರರು ತಿಳಿಸಿದ್ದಾರೆ. ಆದರೆ, ಯಾವತ್ತು ಶಸ್ತ್ರಚಿಕಿತ್ಸೆ ನಡೆಸಬೇಕು ಎಂಬುದರ ಕುರಿತ ದಿನಾಂಕವನ್ನು ತಿಳಿಸಿಲ್ಲ'' ಎಂದು ಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ನವೆಂಬರ್ 26ಕ್ಕೆ ನಿಗದಿಪಡಿಸಿತು.