ಬೆಂಗಳೂರು: ರಾಜ್ಯಸಭೆ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೇ ಸುಮಾರು 40ಕ್ಕೂ ಹೆಚ್ಚು ಶಾಸಕರು ಮತದಾನ ಮಾಡಿದ್ದಾರೆ. ಆಪರೇಷನ್ ಭೀತಿ ಹಿನ್ನೆಲೆಯಲ್ಲಿ ಹೋಟೆಲ್ಗೆ ತರಳಿದ್ದ ಕಾಂಗ್ರೆಸ್ ಶಾಸಕರು, ನೇರವಾಗಿ ವಿಧಾನಸೌಧಕ್ಕೆ ಬಸ್ ಮೂಲಕ ಆಗಮಿಸಿದ್ದಾರೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಮೊದಲಿಗರಾಗಿ ಮತದಾನ ಮಾಡಿದ್ದು, ಉಳಿದಂತೆ ಸುಮಾರು 40ಕ್ಕೂ ಅಧಿಕ ಶಾಸಕರು ಮತದಾನ ಮಾಡಲಿದ್ದಾರೆ. ಇತ್ತ ಖಾಸಗಿ ಹೊಟೇಲ್ನಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕರು ಮತಗಟ್ಟೆಗೆ ಆಗಮಿಸಿ ಚಲಾಯಿಸುತ್ತಿದ್ದಾರೆ.
ಕೈ ಅಭ್ಯರ್ಥಿಗಳಿಗೆ ತಲಾ 47 ಮತ ಬೀಳುವ ನಿರೀಕ್ಷೆ:ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಒಬ್ಬೊಬ್ಬರಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಇತ್ತ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲುವುದು ಖಚಿತ. ಪಕ್ಷೇತರರು ನಮಗೆ ಬೆಂಬಲ ಕೊಡುತ್ತಿದ್ದಾರೆ. ನೀರಿಕ್ಷೇಗಿಂತ ಹೆಚ್ಚು ಮತಗಳು ಬರುತ್ತೆ. ನಿರಾಯಾಸವಾಗಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ನಮ್ಮ 3 ಅಭ್ಯರ್ಥಿಗೆ ತಲಾ 47 ಮತಗಳು ಬರುವ ನೀರಿಕ್ಷೆ ಇದೆ ಎಂದರು.
ಇದೇ ವೇಳೆ ಮಾತನಾಡಿದ ಆರ್.ವಿ. ದೇಶಪಾಂಡೆ, ನಮಗೆ ಯಾವುದೇ ಸಂಶಯ ಇಲ್ಲ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಬಿಜೆಪಿಯವರಿಗಷ್ಟೇ ಸಂಶಯ ಇರೋದು. ಕುಪೇಂದ್ರ ರೆಡ್ಡಿ ನಮಗೆ ಪರಿಚಯ ಅಷ್ಟೇ. ಆದರೆ, ಮತ ಕೇಳಿಲ್ಲ. ನಾಮಪತ್ರ ಸಲ್ಲಿಸುವ ಮುನ್ನ ಸಿಕ್ಕಿದ್ದರು. ನಾಮಪತ್ರ ಸಲ್ಲಿಸಿದ ನಂತರ ಅವರು ನಂಗೆ ಸಿಕ್ಕಿಲ್ಲ ಎಂದರು.
ರಾಜ್ಯಸಭೆ ಚುನಾವಣೆಗಾಗಿನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಹೀಗಾಗಿ ರಾಜ್ಯಸಭೆ ರಣಕಣ ರಂಗೇರಿದ್ದು, ನಂಬರ್ ಗೇಮ್ ಕಸರತ್ತು ಶುರುವಾಗಿದೆ. ಕಾಂಗ್ರೆಸ್ ರಾಜ್ಯದಿಂದ ಅಜಯ್ ಮಕೇನ್, ಸಯ್ಯದ್ ನಾಸೀರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದೆ. ಇತ್ತ ಬಿಜೆಪಿ ನಾರಾಯಣಸಾ ಭಾಂಡಗೆಯನ್ನು ಕಣಕ್ಕಿಳಿಸಿದೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಐದನೇ ಅಭ್ಯರ್ಥಿ ಕಣಕ್ಕಿಳಿಸಿರುವುದರಿಂದ ರಾಜ್ಯಸಭೆ ಚುನಾವಣಾ ಅಖಾಡ ಕಳೆಗಟ್ಟುವಂತೆ ಮಾಡಿದೆ.