ಬೆಂಗಳೂರು: ''ಬಿಜೆಪಿ, ಜೆಡಿಎಸ್ ಬೆಂಗಳೂರು - ಮೈಸೂರು ಪಾದಯಾತ್ರೆಯು ಅಹಿಂದ ವಿರುದ್ಧವಾಗಿದೆ. ಅದಕ್ಕಾಗಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ'' ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಮುಡಾ ಹಗರಣದ ತನಿಖೆ ನಡೆಯುತ್ತಿದೆ. ನಿವೃತ್ತ ನ್ಯಾಯಾಧೀಶರನ್ನು ತನಿಖೆಗೆ ನೇಮಿಸಿದ್ದಾರೆ. ತನಿಖೆ ಮುಗಿದು, ಸತ್ಯ ಹೊರಬರಲಿ. ಅಲ್ಲಿಯವರೆಗೂ ಇವರಿಗೆ ತಾಳ್ಮೆಯೇ ಇಲ್ಲ. ಸಿದ್ದರಾಮಯ್ಯನವರಿಗೆ ಕ್ಲೀನ್ ಇಮೇಜ್ ಇದೆ. ಅದಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಂದ್ರೆ ಅಹಿಂದ ಮುಖಂಡ. ಇದು ಸಿದ್ದರಾಮಯ್ಯನವರ ಮೇಲಿನ ದಾಳಿಯಲ್ಲ. ರಾಜ್ಯದ ಅಹಿಂದ ವರ್ಗದ ಮೇಲಿನ ದಾಳಿ. ಬಿಜೆಪಿ, ಜೆಡಿಎಸ್ ಪಾದಯಾತ್ರೆಯು ಅಹಿಂದ ವಿರುದ್ಧವಾಗಿದೆ. ಅದಕ್ಕಾಗಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಶೀಘ್ರದಲ್ಲೇ ಅದಕ್ಕೆ ದಿನಾಂಕ ನಿಗದಿ ಮಾಡಲಾಗುವುದು'' ಎಂದರು.
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗುತ್ತಾರೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಾರೆ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ಅವರ ಜೊತೆ ಕೆಲವು ಸಚಿವರು ಹೋಗಲಿದ್ದಾರೆ. ವಿರೋಧ ಪಕ್ಷದವರು ಸುಳ್ಳು ಹೇಳುತ್ತಿದ್ದಾರೆ. ಇದನ್ನೇ ದೊಡ್ಡ ಭೂತದ ರೀತಿ ಮಾಡುತ್ತಿದ್ದಾರೆ. ಜೆಡಿಎಸ್ - ಬಿಜೆಪಿ ಹೊಸದಾಗಿ ಮದುವೆ ಮಾಡಿಕೊಂಡಿದ್ದಾರೆ. ಕೆಲ ದಿನಗಳವರೆಗೆ ಪ್ರೀತಿಯಿಂದ ಇರುತ್ತಾರೆ. ಆಮೇಲೆ ಹೇಗಿರುತ್ತಾರೆಂದು ನಿಮಗೆ ಗೊತ್ತಾಗುತ್ತದೆ'' ಎಂದು ವ್ಯಂಗ್ಯವಾಡಿದರು.