ಮೈಸೂರು: ಅಂಬಾವಿಲಾಸ ಅರಮನೆಯ ಮುಂಭಾಗ ಇಂದು ಅರಮನೆ ಆವರಣದ ದೇವಾಲಯಗಳ ಉತ್ಸವ ಮೂರ್ತಿಗಳನ್ನು ತಂದಿಟ್ಟು, ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥಸಪ್ತಮಿ ಆಚರಿಸಲಾಯಿತು. ಭಕ್ತರಿಗೂ ವಿಶೇಷ ಪೂಜೆಗೆ ಅವಕಾಶ ಕಲ್ಪಿಸಲಾಯಿತು.
ಅರಮನೆಯ ಆವರಣದಲ್ಲಿರುವ ಭುವನೇಶ್ವರಿ, ತ್ರಿನೇಶ್ವರ ಸ್ವಾಮಿ, ಲಕ್ಷ್ಮೀರಮಣಸ್ವಾಮಿ, ಶ್ರೀ ಮಹಾಲಕ್ಷ್ಮೀದೇವಿ, ಶ್ರೀ ಪ್ರಸನ್ನ ಕೃಷ್ಣ, ಶ್ರೀ ವೇದ ವರಹಾಸ್ವಾಮಿ, ಶ್ರೀ ಖಿಲ್ಲೇ ವೆಂಕರಟರಮಣ ಸ್ವಾಮಿ ಹಾಗೂ ಗಾಯತ್ರಿ ದೇವಿ ಸೇರಿದಂತೆ ಎಂಟು ದೇವಾಲಯಗಳ ಉತ್ಸವ ಮೂರ್ತಿಗಳನ್ನು ತಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಜಂಬೂ ಸವಾರಿಯ ಪುಷ್ಪಾರ್ಚನೆ ಮಾಡುವ ಸ್ಥಳದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ವರ್ಷದಲ್ಲಿ ಒಂದು ಬಾರಿ ಸಿಗುವ, ಒಟ್ಟಿಗೆ ಅರಮನೆ ಆವರಣದ ಉತ್ಸವ ಮೂರ್ತಿಗಳ ದರ್ಶನ ಮಾಡಿ ಭಕ್ತರು ಪುನೀತರಾದರು.
ಅರ್ಚಕ ಪ್ರಕಾಶ್ ಮಾತು: "ಪ್ರತೀ ವರ್ಷದಂತೆ ಈ ವರ್ಷವೂ ರಥಸಪ್ತಮಿ ಪ್ರಯುಕ್ತ ಚಾಮುಂಡೇಶ್ವರಿ ಪ್ರಾಧಿಕಾರ ಹಾಗೂ ಸರ್ಕಾರದ ವತಿಯಿಂದ ವಿಶೇಷ ಪೂಜೆ ನಡೆಯಿತು. 8 ದೇವಾಲಯಗಳ ಉತ್ಸವ ಮೂರ್ತಿಯನ್ನು ಅರಮನೆಯ ಮುಂಭಾಗ ಇರಿಸಿ ವಿಷೇಶ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮವನ್ನು ಲೋಕಕಲ್ಯಾಣಕ್ಕಾಗಿ ಮಾಡಲಾಗುತ್ತದೆ. ಬಂದಂತಹ ಭಕ್ತರು ಎಲ್ಲ ದೇವತೆಗಳನ್ನು ಒಂದೇ ಜಾಗದಲ್ಲಿ ನೋಡಬಹುದು. ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಎರಡು ಪರ್ವ ಇರುತ್ತದೆ. ಈ ಪರ್ವದಲ್ಲಿ ಸೂರ್ಯದೇವನು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ಪಥ ಬದಲಿಸುತ್ತಾನೆ. ಹೀಗಾಗಿ ಸರ್ವರಿಗೂ ಮಂಗಳ ಉಂಟು ಮಾಡಲಿ ಎಂದು ಲೋಕ ಕಲ್ಯಾಣಕ್ಕಾಗಿ ಈ ಕಾರ್ಯಕ್ರಮ ಮಾಡಲಾಗುತ್ತದೆ. ಅರಮನೆಯ ಆವರಣದಲ್ಲಿ ಇರುವ ದೇವಾಲಯಗಳು ಬಹಳ ವಿಶೇಷವಾಗಿವೆ. ಇದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಆಚರಣೆ. ಆಗಿನ ಕಾಲದಲ್ಲಿ ರಾಜರು ನಡೆಸುತ್ತಿದ್ದರು. ಈಗ ಸರ್ಕಾರವೇ ನಡೆಸಿಕೊಂಡು ಹೋಗುತ್ತಿದೆ. ರಥಸಪ್ತಮಿ ಹಬ್ಬ ಸೂರ್ಯನಾರಾಯಣನಿಗೆ ಬಹಳ ವಿಶೇಷ" ಎಂದು ಅರ್ಚಕ ಪ್ರಕಾಶ್ ತಿಳಿಸಿದರು.
![Ratha Saptami celebrations in front of Ambavilas Palace](https://etvbharatimages.akamaized.net/etvbharat/prod-images/05-02-2025/23478690_thumbnaimeeg.jpg)
ಇದನ್ನೂ ಓದಿ: ಒಕ್ಕುಂದ ಉತ್ಸವ ನೃಪತುಂಗ ಜ್ಯೋತಿ ಮೆರವಣಿಗೆ : ಗೊಂಬೆ-ಡೊಳ್ಳು ಕುಣಿತದ ಆಕರ್ಷಣೆ