ಕಾರವಾರ (ಉತ್ತರ ಕನ್ನಡ) : ಜಾತ್ರೆಗಳನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಭಿನ್ನ ವಿಭಿನ್ನ ಸಂಪ್ರದಾಯಗಳಿಂದಾಗಿ ಅಲ್ಲಿನ ಆಚರಣೆಗಳೂ ವಿಶಿಷ್ಟವಾಗಿರುತ್ತವೆ. ಅದರಂತೆ ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಭಾನುವಾರ ಮಾರ್ಕೆಪೂನಾವ್ ಎನ್ನುವ ವಿಭಿನ್ನ ಜಾತ್ರೆ ಜರುಗಿತು.
ಉತ್ತರಕನ್ನಡ ಜಿಲ್ಲೆಯ ಕಾರವಾರದ ಗಡಿ ಗ್ರಾಮವಾದ ಮಾಜಾಳಿಯಲ್ಲಿ ಮಾರ್ಕೆಪೂನಾವ್ ಎಂಬ ವಿಶಿಷ್ಟ ಜಾತ್ರೆಯಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ಸೂಜಿ ಚುಚ್ಚಿಸಿಕೊಂಡು ನೂಲನ್ನು ಪೋಣಿಸಿಕೊಂಡರೆ, ಇನ್ನೊಂದೆಡೆ ಹೆಣ್ಣು ಮಕ್ಕಳು ಬೆಳಗಿದ ದೀಪವನ್ನು ಹೊತ್ತು ಹರಕೆಯನ್ನು ಈಡೇರಿಸುವ ಮೂಲಕ ಸಂಪ್ರದಾಯವನ್ನು ಆಚರಿಸಿದರು. ಪ್ರತಿವರ್ಷ ಗ್ರಾಮದ ಧಾಡ್ ದೇವರ ದೇವಸ್ಥಾನದ ಬಳಿ ನಡೆಯುವ ಈ ಜಾತ್ರೆಯಲ್ಲಿ ಯುವಕರು ಸೂಜಿ ಚುಚ್ಚಿಸಿಕೊಳ್ಳುವ ಮೂಲಕ ದೇವರಿಗೆ ಹರಕೆಯನ್ನು ಸಲ್ಲಿಸುತ್ತಾರೆ.
ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಅಲ್ಲದೇ ಮುಂದೆ ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಧೈರ್ಯವಾಗಿ ಎದುರಿಸಲು ಇದರಿಂದ ಸಹಾಯವಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಮದುವೆಗೂ ಮೊದಲು ಯುವಕರು ಮತ್ತು ಮಕ್ಕಳು ಸೂಜಿ ಚುಚ್ಚಿಸಿಕೊಳ್ಳುವುದು ಇಲ್ಲಿನ ವಾಡಿಕೆಯಾಗಿದೆ. ಈ ರೀತಿ ಮಾಡಿದಲ್ಲಿ ಮುಂದೆ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರಾಗುವುದಿಲ್ಲ ಅನ್ನೋ ನಂಬಿಕೆ. ಈ ಸಂಪ್ರದಾಯ ಹಿಂದಿನಿಂದಲೂ ರೂಢಿಯಲ್ಲಿದ್ದು, ಈ ಬಾರಿ ಸುಮಾರು 15ಕ್ಕೂ ಅಧಿಕ ಪುರುಷರು ಹಾಗೂ ಮಕ್ಕಳು ಅರ್ಚಕರಿಂದ ದಾರ ಪೋಣಿಸಿಕೊಂಡು ಹರಕೆ ಅರ್ಪಿಸಿದರು.