ಕಲಬುರಗಿ:ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ಕಲುಷಿತ ನೀರು ಕುಡಿದು 80ಕ್ಕೂ ಅಧಿಕ ಜನ ಅಸ್ವಸ್ಥಗೊಂಡ ಪ್ರಕರಣ ಸಂಬಂಧ ಪಿಡಿಒ ಸುಕನ್ಯಾ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ನಿಂಬರ್ಗಾ ಗ್ರಾಮದ ಭೋವಿ ಸಮಾಜ ಬಡಾವಣೆಯ ಓವರ್ ಹೆಡ್ ಟ್ಯಾಂಕ್ದಿಂದ ಸರಬರಾಜುವಾದ ಕುಡಿಯುವ ನೀರನ್ನು ಸೇವಿಸಿ ಸೋಮವಾರ 80ಕ್ಕೂ ಅಧಿಕ ಜನರು ವಾಂತಿ ಭೇದಿಯಿಂದ ಬಳಲಿ ಅಸ್ವಸ್ಥಗೊಂಡಿದ್ದರು. ತಕ್ಷಣ ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಅವರಿಗೆ ಚಿಕಿತ್ಸೆ ಕೊಡಲಾಗಿದ್ದು, ಕ್ರಮೇಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಗ್ರಾಮದಲ್ಲಿ ಇಂತಹ ಅವಘಡ ಸಂಭವಿಸಲು ಗ್ರಾಪಂ ಪಂಚಾಯಿತಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೇ ಕಾರಣ. ಟ್ಯಾಂಕ್ ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಹೇಳಿದರೂ ಯಾರು ಕೂಡ ಗಮನ ಹರಿಸದಿದ್ದಕ್ಕೆ ಈ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ''ಘಟನೆ ಹಿನ್ನೆಲೆಯಲ್ಲಿ ಪಿಡಿಒ ಸುಕನ್ಯಾರನ್ನು ಸೇವೆಯಿಂದ ಅಮಾನತು ಮಾಡಿ ತಾಲೂಕಾಡಳಿತ ಆದೇಶ ಹೊರಡಿಸಿದೆ. ಪಕ್ಕದ ಸುಂಟನೂರ ಗ್ರಾಪಂ ಪಿಡಿಒಗೆ ಪ್ರಭಾರ ಅಧಿಕಾರ ವಹಿಸಲಾಗಿದೆ'' ಎಂದು ಆಳಂದ ಇಓ ಮಾನಪ್ಪ ಕಟ್ಟಿಮನಿ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಗ್ರಾಮಕ್ಕೆ ಶಾಸಕ ಬಿ.ಆರ್.ಪಾಟೀಲ್ ಭೇಟಿ: ಗ್ರಾಮಸ್ಥರು ಅಸ್ವಸ್ಥರಾಗಿರುವ ಸುದ್ದಿ ತಿಳಿದು ಮಂಗಳವಾರ ನಿಂಬರ್ಗಾ ಗ್ರಾಮಕ್ಕೆ ದೌಡಾಯಿಸಿದ ಶಾಸಕ ಬಿ.ಆರ್.ಪಾಟೀಲ್ ನೇರವಾಗಿ ಆಸ್ಪತ್ರೆಗೆ ತೆರಳಿ, ಜನರ ಆರೋಗ್ಯ ವಿಚಾರಿಸಿ ಹಣ್ಣು ಹಂಪಲು ನೀಡಿ ಧೈರ್ಯ ತುಂಬಿದರು. ಸಮುದಾಯ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಡಾ.ಇರ್ಫಾನ್ ಅಲಿ ಅವರೊಂದಿಗೆ ಸಮಾಲೋಚನೆ ನಡೆಸಿ, ಜನರ ಆರೋಗ್ಯ ಸ್ಥೀತಿಗತಿಯ ಬಗ್ಗೆ ಮಾಹಿತಿ ಕಲೆಹಾಕಿದರು.