ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಿಜಿ ಲಾಕರ್ ಗೊಂದಲ (ETV Bharat) ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯಲ್ಲಿ ವ್ಯಾಸಂಗ ಮಾಡಿದ ಮತ್ತು ಮಾಡುತ್ತಿರುವ 2022-23ನೇ ಸಾಲಿನ ನಂತರದ ವಿದ್ಯಾರ್ಥಿಗಳು ಸರ್ಕಾರದ ಹೊಸ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ಕಾರದ ನಿಯಮದ ಪ್ರಕಾರ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಅಂಕಪಟ್ಟಿಯನ್ನು ಡಿಜಿ ಲಾಕರ್ನಲ್ಲಿ ಅಪ್ಡೇಟ್ ಮಾಡಬೇಕು. ಅದರಂತೆ ವಿದ್ಯಾರ್ಥಿಗಳು ಡಿಜಿ ಲಾಕರ್ನಿಂದ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಆದರೆ, ಈ ವ್ಯವಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಹೈರಾಣು ಮಾಡಿದೆ.
ಡಿಜಿ ಲಾಕರ್ ವ್ಯವಸ್ಥೆಯಿಂದ ವಿಶ್ವವಿದ್ಯಾನಿಲಯದ ಕಡೆಯಿಂದ ದೊರಕಬೇಕಾದ ಭೌತಿಕ ಅಂಕಗಳನ್ನು ಹೊಂದಿದ ಅಂಕಪಟ್ಟಿ ದೊರೆಯುತ್ತಿಲ್ಲ. ಈ ವಿಚಾರವಾಗಿ ವಿದ್ಯಾರ್ಥಿಗಳು ಉಪ ಕುಲಪತಿಗಳನ್ನು ಕೇಳಿದಾಗ, ಪ್ರಸ್ತುತ ಭೌತಿಕ ಅಂಕಪಟ್ಟಿಗಳನ್ನು ನೀಡದಿರುವಂತೆ ಸರ್ಕಾರದ ಆದೇಶವಿರುವುದಾಗಿಯೂ, ಈ ವಿಚಾರದಲ್ಲಿ ಬದಲಾವಣೆ ತರಲು ಸರ್ಕಾರಕ್ಕೆ ಮಾತ್ರ ಸಾಧ್ಯವಿರುವುದಾಗಿಯೂ ತಿಳಿಸಿದ್ದಾರೆ.
ಶುಲ್ಕ ಕಟ್ಟಿದರೂ ಸಿಗದ ಅಂಕಪಟ್ಟಿ; ಸೆಮಿಸ್ಟರ್ ಒಂದಕ್ಕೆ ₹230ರಂತೆ ಅಂಕಪಟ್ಟಿ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಪಾವತಿಸಿರುತ್ತಾರೆ. ಪ್ರತಿ ವಿದ್ಯಾರ್ಥಿಗಳಿಂದ ಶುಲ್ಕ ಭರಿಸಿಕೊಂಡ ನಂತರವೂ ಸರಿಯಾದ ಅಂಕಪಟ್ಟಿ ದೊರೆಯುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು.
ಹೀಗಿದೆ ಸಮಸ್ಯೆ; ಪ್ರಸ್ತುತ ಅಂಕಪಟ್ಟಿಗಳನ್ನು ಸರ್ಕಾರದ ಹಲವಾರು ದಾಖಲೆಗಳನ್ನು ಹೊಂದಿರುವ, ಪಡೆದುಕೊಳ್ಳಲು ಬಳಸುವ ಡಿಜಿ ಲಾಕರ್ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ವಿಶ್ವವಿದ್ಯಾನಿಲಯ ಸೂಚಿಸುತ್ತದೆ. ಆದರೆ, ಈ ತಂತ್ರಜ್ಞಾನವು ಹಲವಾರು ಸಮಸ್ಯೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳಿಗೆ ಸರಿಯಾಗಿ ಅಂಕಪಟ್ಟಿಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳ ಸಂಕ್ಷಿಪ್ತ ಅಂಕಗಳು, ಭಾವಚಿತ್ರ, ಸಂಬಂಧಪಟ್ಟ ಅಧಿಕಾರಿಗಳ ಹಸ್ತಾಕ್ಷರ, ಪಠ್ಯ ವಿಷಯಗಳು ಮತ್ತು ಪ್ರೊಜೆಕ್ಟ್ ವಿಷಯಗಳು, ಮತ್ತು ಉತ್ತೀರ್ಣ-ಅನುತ್ತೀರ್ಣತೆಯ ಮಾನದಂಡಗಳನ್ನು ಹೊಂದಿಲ್ಲದ ಡಿಜಿಟಲ್ ಅಂಕಪಟ್ಟಿಗಳು ಸಿಗುತ್ತಿವೆ. ಇದು ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡಿದೆ.
ಸಂಕಷ್ಟ ತೋಡಿಕೊಂಡ ವಿದ್ಯಾರ್ಥಿಗಳು; ಡಿಜಿಟಲ್ ಅಂಕಪಟ್ಟಿಯಲ್ಲಿ ನಮೂದಿಸಿರುವಂತೆ ಆ ಅಂಕಪಟ್ಟಿಗೆ ಮಾನ್ಯತೆ ಇರುವುದಿಲ್ಲ ಹಾಗೂ ವಿಶ್ವವಿದ್ಯಾಲಯದ ಅಂಕಪಟ್ಟಿಗೂ ಡಿಜಿಟಲ್ ಅಂಕಪಟ್ಟಿಗೂ ವ್ಯತ್ಯಾಸ ಇರುವ ಸಾಧ್ಯತೆ ಇದೆ ಎಂಬ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಇಂತಹ ಹತ್ತು ಹಲವು ದೋಷಗಳನ್ನು ಒಳಗೊಂಡ ಡಿಜಿಟಲ್ ಅಂಕ ಪಟ್ಟಿಗಳನ್ನು ಯಾವುದೇ ಕಂಪನಿಗಳು ಉದ್ಯೋಗಕ್ಕೆ ಸಂಬಂಧಿಸಿದ ಪರಿಶೀಲನೆ ವೇಳೆ ಮಾನ್ಯ ಮಾಡುತ್ತಿಲ್ಲ. ವಿಶೇಷವಾಗಿ ಹೊರದೇಶಗಳಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಭೌತಿಕ ಅಂಕಪಟ್ಟಿ ಹಾಜರುಪಡಿಸುವುದು ಕಡ್ಡಾಯವಾಗಿದೆ. ಈ ವೇಳೆ ತಮಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ವಿದ್ಯಾರ್ಥಿ ಸಲ್ಮಾನ್, ''ನಾನು ಫೈನಲ್ ಎಂಬಿಎ ವಿದ್ಯಾರ್ಥಿ. ನಾವು ಈವರೆಗೆ ಬರೆದ ಸೆಮಿಸ್ಟರ್ಗೆ ಮಾರ್ಕ್ಸ್ ಕಾರ್ಡ್ ಕೊಟ್ಟಿಲ್ಲ. ವಿದ್ಯಾರ್ಥಿಗಳ ಕರ್ತವ್ಯ ಮಾಡಿದರೂ ವಿಶ್ವವಿದ್ಯಾನಿಲಯ ನಮಗೆ ಫಲಿತಾಂಶ ನೀಡುತ್ತಿಲ್ಲ. ಕಳೆದ ವರ್ಷದ ವಿದ್ಯಾರ್ಥಿಗಳಿಗೆ ಡಿಜಿ ಲಾಕರ್ ಮೂಲಕ ಅಂಕಪಟ್ಟಿ ಪಡೆಯಲು ತಿಳಿಸಿದ್ದಾರೆ. ಡಿಜಿ ಲಾಕರ್ ಅಂಕಪಟ್ಟಿ ಸರಿಯಾಗಿಲ್ಲ. ವಿದ್ಯಾರ್ಥಿಯ ಭಾವಚಿತ್ರ ಇಲ್ಲ. ಅಂಕಪಟ್ಟಿಯಲ್ಲಿ ಅಂಕವೇ ಇಲ್ಲ. ಈ ಅಂಕಪಟ್ಟಿ ಸರಿಯಾದ ಅಂಕಪಟ್ಟಿ ಅಲ್ಲ ಎಂದು ಅದರಲ್ಲಿ ಹೇಳಲಾಗುತ್ತದೆ. ಆದರೆ ವಿಶ್ವವಿದ್ಯಾನಿಲಯ ಬೇರೆ ಅಂಕಪಟ್ಟಿ ಸಿಗುವುದಿಲ್ಲ ಎನ್ನುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬಡ, ಮಧ್ಯಮ ವರ್ಗದಿಂದ ಬಂದವರು. ಕಷ್ಟಪಟ್ಟು ಕಲಿತ ವಿದ್ಯಾರ್ಥಿಗಳಿಗೆ ಸರಿಯಾದ ಅಂಕಪಟ್ಟಿ ಇವರು ಕೊಡ್ತಾ ಇಲ್ಲ'' ಎಂದು ಅಳಲು ತೋಡಿಕೊಂಡರು.
ವಿದ್ಯಾರ್ಥಿನಿ ಲೀನಾ ಮಾತನಾಡಿ. ''ಡಿಜಿ ಲಾಕರ್ನಿಂದ ಅಂಕಪಟ್ಟಿ ಕೊಟ್ಟರೆ ನಾವು ಉದ್ಯೋಗಕ್ಕೆ ಹೋದಾಗ ಅದಕ್ಕೆ ಮಾನ್ಯತೆ ಇರುವುದಿಲ್ಲ. ಹೊರದೇಶದ ಉದ್ಯೋಗಕ್ಕೆ ಅರ್ಜಿ ಹಾಕಿದರೆ ಈ ಅಂಕಪಟ್ಟಿಯನ್ನು ತೋರಿಸಿದರೆ ಇದು ಮೋಸ ಎಂದು ಪರಿಗಣಿಸಬಹುದು. ಡಿಜಿ ಲಾಕರ್ನಿಂದ ಜೀವನಕ್ಕೆ, ವೃತ್ತಿಗೆ ತೊಂದರೆಯಾಗಲಿದೆ. ಇದರಿಂದ ನಮ್ಮ ಜೀವನವನ್ನೇ ಹಾಳು ಮಾಡಿದಂತಾಗುತ್ತದೆ'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕುಲಪತಿಗಳ ಸ್ಪಷ್ಟನೆ; ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ ಎಲ್ ಧರ್ಮ, ಯುಯುಸಿಎಂಎಸ್ ಆದೇಶದ ಪ್ರಕಾರ ಅಂಕಪಟ್ಟಿಯನ್ನು ನ್ಯಾಡ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಆದ ಕಾರಣ ವಿಶ್ವವಿದ್ಯಾನಿಲಯಗಳು ಅಂಕಪಟ್ಟಿ ನೀಡಲು ಬರುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಗಮನಕ್ಕೆ ತಂದಿದ್ದಾರೆ. ಜಾಬ್ ಮಾರ್ಕೆಟ್ನಲ್ಲಿ ಈ ಅಂಕಪಟ್ಟಿ ಪರಿಗಣಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಸರ್ಕಾರ ಇಂದು ಈ ಬಗ್ಗೆ ಸಭೆ ನಡೆಸಲಿದೆ ಎಂಬ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು: ಫುಟ್ಬಾಲ್ ಪಂದ್ಯಾಟ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ: ಅರೆಬೆತ್ತಲೆಗೊಳಿಸಿ ವಿದ್ಯಾರ್ಥಿ ಥಳಿಸಿದ ಇಬ್ಬರು ವಶಕ್ಕೆ - Riot between two colleges students