ಮಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಈ ಬಾರಿ 42ನೇ ಘಟಿಕೋತ್ಸವವನ್ನು ಗೊಂದಲಗಳೊಂದಿಗೆ, ಅವ್ಯವಸ್ಥಿತವಾಗಿ ನಡೆಸುವುದರ ಜೊತೆಗೆ ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.
ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವ ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ವಿವಿ ಸಭಾಂಗಣದಲ್ಲಿ ನಡೆದಿದ್ದು, ರಾಜ್ಯಪಾಲರು, ರಾಜ್ಯಪಾಲರ ಭದ್ರತಾ ಸಿಬ್ಬಂದಿಗಳಿಂದ ತೀರಾ ಗೊಂದಲಕ್ಕೆ ಕಾರಣವಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಆರಂಭವು ನಾಡಗೀತೆ ಮತ್ತು ವಿಶ್ವವಿದ್ಯಾನಿಲಯದ ಗೀತೆಯೊಂದಿಗೆ ಆರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಗುವುದು ನಡೆಯಬೇಕಿತ್ತು. ಅದಕ್ಕೆ ಮೊದಲೇ ಸಿದ್ಧತೆ ನಡೆದಿತ್ತು. ಆದರೆ ವೇದಿಕೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಡಗೀತೆ ಮತ್ತು ವಿಶ್ವವಿದ್ಯಾನಿಲಯದ ಗೀತೆಗೆ ಮುಂಚೆ ರಾಷ್ಟ್ರಗೀತೆಯನ್ನು ನುಡಿಸುವಂತೆ ಸೂಚಿಸಿದರು.
ಕಾರ್ಯಕ್ರಮದ ಅಂತ್ಯಕ್ಕೆ ಮತ್ತೊಮ್ಮೆ ರಾಷ್ಟ್ರಗೀತೆ ನುಡಿಸಲಾಯಿತು. ಕಾರ್ಯಕ್ರಮವನ್ನು ಶಿಷ್ಟಾಚಾರಗಳೊಂದಿಗೆ ಮೊದಲೇ ಸಿದ್ಧಪಡಿಸಲಾಗಿತ್ತಾದರೂ ವೇದಿಕೆಯಲ್ಲಿ ಅವುಗಳನ್ನು ಬದಲಾಯಿಸಲು ರಾಜ್ಯಪಾಲರು, ಭದ್ರತಾ ಸಿಬ್ಬಂದಿ ಸೂಚಿಸಿದ್ದರಿಂದ ಮತ್ತೆ ಗೊಂದಲ ನಿರ್ಮಾಣವಾಯಿತು. ಗೌರವ ಡಾಕ್ಟರೇಟ್ ನೀಡುವ ಸಂದರ್ಭದಲ್ಲಿ, ಪದವಿ ಪ್ರಮಾಣ ಮಾಡುವ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಈ ಮೊದಲಿನಂತೆ ಮಾಡುತ್ತಿದ್ದ ವ್ಯವಸ್ಥೆಯನ್ನು ವೇದಿಕೆಯಲ್ಲಿ ಬದಲಾಯಿಸಲಾಯಿತು.
ಈ ನಡುವೆ ರಾಜ್ಯಪಾಲರು ಮಂಗಳೂರು ವಿವಿ ಕುಲಪತಿ ಡಾ. ಪಿ ಎಲ್ ಧರ್ಮ ಅವರನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ಕುಲಪತಿಗಳು ವೇದಿಕೆಯಲ್ಲಿ ಗದ್ಗದಿತರಾದರು. ಇನ್ನು ಶಿಷ್ಟಾಚಾರದಂತೆ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಭದ್ರತಾ ಸಿಬ್ಬಂದಿಗಳು ವೇದಿಕೆಯಲ್ಲಿಯೇ ವಿಶ್ವವಿದ್ಯಾನಿಲಯದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸುತ್ತಿದ್ದದ್ದು ಕಂಡುಬಂತು.
ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ: ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಎಂ.ಆರ್. ಜಿ ಗ್ರೂಪ್ ಮಾಲೀಕ ಕೆ. ಪ್ರಕಾಶ್ ಶೆಟ್ಟಿ, ಡಾ. ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಆದರೆ ಈ ಗೌರವ ಡಾಕ್ಟರೇಟ್ ಸ್ವೀಕರಿಸಲು ಡಾ ತುಂಬೆ ಮೊಯ್ದಿನ್ ಗೈರಾಗಿದ್ದರು.
ಘಟಿಕೋತ್ಸವದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ, ಮಹಾ ನಿರ್ದೇಶಕರು ಪ್ರೊ. ಸಚಿನ್ ಚತುರ್ವೇದಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದರು. ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಗಿರುವ ಥಾವರ್ ಚಂದ್ ಗೆಹ್ಲೋಟ್ ಈ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.