ಮಂಗಳೂರು:ಆನ್‌ಲೈನ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ, ಮಂಗಳೂರು ನಗರದ ನಿವಾಸಿಯೊಬ್ಬರಿಂದ 1.50 ಕೋಟಿ ರೂ. ಪಡೆದು ವಂಚಿಸಿರುವ ಪ್ರಕರಣ ನಡೆದಿದೆ.
ದೂರುದಾರರು ಫೇಸ್‌ಬುಕ್ ಬಳಸುತ್ತಿದ್ದಾಗ "Jefferies wealth multiplication Plan' ಎಂಬ ಪೋಸ್ಟ್ ನೋಡಿ, ಅದರಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ, ಮೊಬೈಲ್ ಸಂಖ್ಯೆ ನಮೂದಿಸಿದ್ದರು. ಮೇ 3ರಂದು ಅಪರಿಚಿತ ವ್ಯಕ್ತಿಯೊಬ್ಬ ದೂರುದಾರರನ್ನು "Jefferies wealth multiplication center-223' ಗ್ರೂಪ್ಗೆ ಸೇರ್ಪಡೆಗೊಳಿಸಿದ್ದ. ಆ ಗ್ರೂಪ್‌ನಲ್ಲಿದ್ದ ಇತರ ಸದಸ್ಯರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಬಂದಿರುವುದಾಗಿ ಸ್ಟೀನ್‌ಶಾಟ್‌ಗಳನ್ನು ಹಾಕುತ್ತಿದ್ದರು. ಇದನ್ನು ನೋಡಿ ನಂಬಿದ ದೂರುದಾರರು, ಪ್ರೇರಿತಗೊಂಡು ಹೂಡಿಕೆ ಮಾಡಲು ಮುಂದಾಗಿದ್ದಾರೆ. ಗ್ರೂಪ್‌ನ ಅಡ್ಮಿನ್ ಆಗಿದ್ದ ಅಪರಿಚಿತ ವ್ಯಕ್ತಿ ಜೂಲಿಯಾ ಸ್ಟನ್ ಎಂಬವರು ಸೈಟ್‌ನ ಲಿಂಕ್ ಅನ್ನು ದೂರುದಾರರಿಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅನಂತರ ಅವರು ತಿಳಿಸಿರುವಂತೆ ದೂರುದಾರರು ಷೇರು ಮಾರ್ಕೆಟ್‌ಗೆ ಸಂಬಂಧಿಸಿದಂತೆ ಖಾತೆಯೊಂದನ್ನು ತೆರೆದಿದ್ದರು. ಷೇರುಗಳನ್ನು ಖರೀದಿಸಿ ಲಾಭ ಗಳಿಸುವ ಇರಾದೆಯಿಂದ ಮೇ 28ರಿಂದ ಜೂನ್ 28ರ ವರೆಗೆ ಹಂತ - ಹಂತವಾಗಿ 73 ಲಕ್ಷ ರೂ. ಹಾಗೂ 77 ಲಕ್ಷ ರೂ. ಸೇರಿದಂತೆ ಒಟ್ಟು 1.50 ಕೋಟಿ ರೂ.ಗಳನ್ನು ಅಪರಿಚಿತ ವ್ಯಕ್ತಿ ನೀಡಿದ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಕೆಲವು ದಿನಗಳ ಬಳಿಕ ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಮುಂದಾದಾಗ ವಿಥ್ ಡ್ರಾ ಮಾಡಲು ಸಾಧ್ಯವಾಗಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ.