ಮಂಡ್ಯ:ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಅವರು 8,51,881 ಮತಗಳೊಂದಿಗೆ ಭರ್ಜರಿ ಗೆಲುವು ಕಂಡಿದ್ದಾರೆ. 5,67,261 ಮತ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಸೋಲಿನ ರುಚಿ ಕಂಡಿದ್ದಾರೆ.
- ಮಾಜಿ ಸಿಎಂ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ - 8,51,881 ಮತಗಳು
- ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು - 5,67,261 ಮತಗಳು.
- ಮತಗಳ ಅಂತರ - 2,84,620 ಮತಗಳು
ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಗೆದ್ದಿದ್ದರು. ಈ ಬಾರಿ ಕುಮಾರಸ್ವಾಮಿ ಈ ದಾಖಲೆಯನ್ನು ಮುರಿದಿದ್ದಾರೆ. 18ನೇ ಸುತ್ತಿನ ಮತ ಎಣಿಕೆ ಮುಗಿದ ಬಳಿಕ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ 2,84,620 ಮತಗಳ ಮುನ್ನಡೆ ಪಡೆದು ಗೆದ್ದು ಬೀಗಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಈಗಾಗಲೇ ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಮತ ಎಣಿಕೆ ಆರಂಭದಿಂದಲೂ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಸ್ಟಾರ್ ಚಂದ್ರುಗೆ ಭಾರಿ ಮುಖಭಂಗವಾಗಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗರಿಬ್ಬರ ಮಧ್ಯೆಯೇ ಭಾರಿ ಪೈಪೋಟಿ ಏರ್ಪಟ್ಟಿತ್ತು. ಆದರೆ, ಗೆಲುವು ಬಹುತೇಕ ಖಚಿತವಾಗುತ್ತಿದ್ದಂತೆ ತಮ್ಮ ಬಿಡದಿಯ ತೋಟದ ಮನೆಯಿಂದ ಮಂಡ್ಯಕ್ಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆ ಹೆಚ್ಡಿಕೆ ಆಗಮಿಸಿದರು. ಜೆಡಿಎಸ್ ಕಾರ್ಯಕರ್ತರ ಸಂಭ್ರಮ ಜೋರಾಗಿದೆ. ಕಾರ್ಯಕರ್ತರು, ಮತದಾರರು ಮಾಜಿ ಸಿಎಂ ಅನ್ನು ಆರತಿ ಬೆಳಗಿ ಸ್ವಾಗತಿಸಿದ್ದಾರೆ.