ಮಂಡ್ಯ :ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಇಂದು ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಒಗ್ಗಟ್ಟಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದೇವೆ. ಪಕ್ಷಾತೀತವಾಗಿ ಈ ಕೆಲಸವಾಗಿದೆ. ಯಶಸ್ವಿಯಾಗಿ ಸಾಹಿತ್ಯ ಸಮ್ಮೇಳನ ನಡೆದಿದೆ. 6 ಲಕ್ಷಕ್ಕೂ ಹೆಚ್ಚು ಜನ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ನಿತ್ಯ 2 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ನಾಡೋಜ ಮಹೇಶ್ ಜೋಷಿ ಅವರು ಶ್ರಮಿಸಿದ್ದಾರೆ. ಸಾಹಿತ್ಯ ಸಮಯದಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. ಹೊರ ದೇಶದಿಂದಲೂ ಕನ್ನಡ ಅಭಿಮಾನಿಗಳು ಭಾಗಿಯಾಗಿದ್ದರು. ಕನ್ನಡ ಹೆಚ್ಚು ಮಾತನಾಡುವ ಜಿಲ್ಲೆ ನಮ್ಮ ಮಂಡ್ಯ. ಅಚ್ಚುಕಟ್ಟಾಗಿ ಸಮ್ಮೇಳನ ನಡೆದಿದೆ. ಸಮ್ಮೇಳನ ಯಶಸ್ವಿಯಾಗಲು ಕಾರಣರಾದ ಜಿಲ್ಲೆಯ ಜನರಿಗೆ ಧನ್ಯವಾದಗಳು ಎಂದರು.
ಸಭಾಪತಿ ಬಸವರಾಜು ಹೊರಟ್ಟಿ ಮಾತನಾಡಿ, ಇಡೀ ಕರ್ನಾಟಕದಲ್ಲಿ ಮಂಡ್ಯದಲ್ಲಿ ಮಾತ್ರ ಕನ್ನಡವೊಂದನ್ನೇ ಮಾತನಾಡ್ತಾರೆ. 99% ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯ. ಇಲ್ಲೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರುವುದು ಸಂತಸ ತಂದಿದೆ. ನಿರ್ಣಯ ಮಾಡುವುದು ಮುಖ್ಯ ಅಲ್ಲ, ಅವುಗಳನ್ನ ಜಾರಿಗೆ ತರಬೇಕು. ಕೋಟಿ ಕೋಟಿ ಹಣ ಖರ್ಚು ಮಾಡಿ ಸಮ್ಮೇಳನ ಮಾಡುವುದರಲ್ಲಿ ಅರ್ಥವಿಲ್ಲ. ಸರ್ಕಾರದ ಗಮನಕ್ಕೆ ತಂದು ಅನುಷ್ಠಾನ ಮಾಡಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಕನ್ನಡ ಎಷ್ಟು ಜನ ಬಳಕೆ ಮಾಡ್ತಾರೆ? ಬೆಂಗಳೂರಿನಲ್ಲಿ 23% ಮಾತ್ರ ಕನ್ನಡ ಮಾತನಾಡ್ತಾರೆ. ಕನ್ನಡ ಭಾಷೆ ಬಳಕೆ ಭಾಷೆಯಾಗಬೇಕು. ಪ್ರತಿಯೊಬ್ಬ ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನ್ನಡ ಶಾಲೆಗಳು ಬಂದ್ ಆಗ್ತಿವೆ, ಕನ್ನಡ ಶಾಲೆಯನ್ನ ಉದ್ಧಾರ ಮಾಡ್ತಿಲ್ಲ. ಶಿಕ್ಷಕರು ಪಾಠ ಮಾಡ್ತಿಲ್ಲ, ಅವರ ಕೆಲಸ ಹೊರೆಯಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯರೂಪಕ್ಕೆ ತರಬೇಕು. ಕನ್ನಡ ಭಾಷೆ ಕನ್ನಡಿಗರ ಭಾಷೆಯಾಗಬೇಕು. ಶಿಕ್ಷಣ ಮಂತ್ರಿಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಇಲ್ಲಿ ತೆಗೆದುಕೊಂಡ ನಿರ್ಣಯ ಅನುಷ್ಠಾನವಾಗಬೇಕು. ಇಲ್ಲ ಮುಂದಿನ ಸಮ್ಮೇಳನದಲ್ಲಿ ನಿಮ್ಮ ವಿರುದ್ದ ಭಾಷಣ ಮಾಡ್ತೇನೆ. ಮಂಡ್ಯ ಜನರಿಗೆ ಬೇರೆ ಭಾಷೆ ಗೊತ್ತಿಲ್ಲ, ಕನ್ನಡ ಭಾಷೆಯ ಜಿಲ್ಲೆ. ಕರ್ನಾಟಕಕ್ಕೆ ಮಂಡ್ಯ ಮಾದರಿಯಾಗುವ ಜಿಲ್ಲೆಯಾಗುತ್ತೆ ಎಂದು ಸಭಾಪತಿ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷ ಡಾ. ಗೊ. ರು ಚನ್ನಬಸಪ್ಪ, ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀ, ಸುತ್ತೂರು ಶಿವರಾತ್ರಿ ದೇಶಿಕೇಂದ್ರದ ಸ್ವಾಮೀಜಿ, ಸಿದ್ದಗಂಗಾ ಮಂಠದ ಸಿದ್ದಲಿಂಗ ಶ್ರೀ, ಅವಧೂತ ವಿನಯ್ ಗುರೂಜಿ, ಶಾಸಕ ಗಾಣಿಗ ಪಿ. ರವಿಕುಮಾರ್ ಸೇರಿದಂತೆ ಹಲವ್ಯ ಗಣ್ಯರು ಮತ್ತು ಸಾಹಿತ್ಯಾಸಕ್ತರು ಭಾಗಿಯಾಗಿದ್ದರು.
ಇದನ್ನೂ ಓದಿ :ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಮನಸೆಳೆಯುತ್ತಿರುವ ಬಾ ಗುರು ಬುಕ್ ತಗೋ ಮಳಿಗೆ : ಏನಿದರ ವಿಶೇಷ? - BA GURU BOOK TAGO