ಕರ್ನಾಟಕ

karnataka

ETV Bharat / state

ಶ್ರೀಧರ ಹಂದೆ, ಎಂ.ಕೆ.ರಮೇಶ್ ಆಚಾರ್ಯಗೆ ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ - Yakshamangala Award Announcement - YAKSHAMANGALA AWARD ANNOUNCEMENT

ರಾಧಾಕೃಷ್ಣ ಕಲ್ಚಾರ್ ಅವರ 'ಪೀಠಿಕಾ ಪ್ರಕರಣ' ಕೃತಿ ಮಂಗಳೂರು ವಿಶ್ವವಿದ್ಯಾಲಯದಿಂದ ಕೊಡಮಾಡುವ ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.

MK Ramesh Acharya, Sridhara Hande, 'Pithika Prakarana' book
ಎಂ.ಕೆ.ರಮೇಶ್ ಆಚಾರ್ಯ, ಶ್ರೀಧರ ಹಂದೆ, 'ಪೀಠಿಕಾ ಪ್ರಕರಣ' ಕೃತಿ (ETV Bharat)

By ETV Bharat Karnataka Team

Published : Jun 21, 2024, 1:30 PM IST

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23 ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪ್ರಕಟಗೊಂಡಿದೆ. ಯಕ್ಷಮಂಗಳ ಪ್ರಶಸ್ತಿಗೆ ಮಕ್ಕಳ ಮೇಳ ಸಾಲಿಗ್ರಾಮದ ಸಂಚಾಲಕರು, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಶ್ರೀಧರ ಹಂದೆ ಹಾಗೂ ತೆಂಕು ಮತ್ತು ಬಡಗುತಿಟ್ಟಿನ ಹಿರಿಯ ಸ್ತ್ರೀವೇಷ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಅವರು ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ರಾಧಾಕೃಷ್ಣ ಕಲ್ಚಾರ್ ಅವರ 'ಪೀಠಿಕಾ ಪ್ರಕರಣ' ಕೃತಿಯು ಆಯ್ಕೆಯಾಗಿದೆ.

ಯಕ್ಷಮಂಗಳ ಪ್ರಶಸ್ತಿಯು 25 ಸಾವಿರ ರೂ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿಯು 10 ಸಾವಿರ ನಗದು, ಪ್ರಶಸ್ತಿ, ಸ್ಮರಣಿಕೆಗಳನ್ನು ಒಳಗೊಂಡಿದೆ. ಜಾನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ ಅವರ ನೇತೃತ್ವದಲ್ಲಿ ಪ್ರೊ.ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕರ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯ‌ ಸಭೆಯಲ್ಲಿ ಈ ಹೆಸರುಗಳನ್ನು ಸರ್ವಾನುಮತದಿಂದ ಶಿಫಾರಸು ಮಾಡಲಾಯಿತು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಯಕ್ಷಮಂಗಳ ಪ್ರಶಸ್ತಿ ಪ್ರದಾನ‌ ಮಾಡಲಾಗುವುದು ಎಂದು ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ವಿಜೇತರ ಪರಿಚಯ:

ಶ್ರೀಧರ ಹಂದೆ:ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಕಲಾವಿದರಾಗಿ,‌ ಯಕ್ಷಗಾನ ಸಂಘಟಕರಾಗಿ ಗುರುತಿಸಿರುವ ಶ್ರೀಧರ ಹಂದೆಯವರು ಮಕ್ಕಳ ಯಕ್ಷಗಾನ ಮೇಳವೆಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿ ಸಾಕಾರಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಉಪನ್ಯಾಸಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು 1991ರಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ಅವರಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಕ್ಕಳಿಗೆ ಯಕ್ಷಕಲೆಯನ್ನು ಶಾಸ್ತ್ರೀಯವಾಗಿ ತರಬೇತಿ ನೀಡಿದವರು. ಭಾರತ ಮಾತ್ರವಲ್ಲ ಅಮೆರಿಕ, ಬೆಹರೈನ್, ಲಂಡನ್, ಮ್ಯಾಂಚೆಸ್ಟರ್​ ಮುಂತಾದೆಡೆ ಪ್ರದರ್ಶನ ನೀಡುವ ಮೂಲಕ ಯಕ್ಷಗಾನವನ್ನು ವಿಶ್ವವ್ಯಾಪಿಗೊಳಿಸಲು ಶ್ರಮಿಸಿದವರು. ಕಳೆದ 43 ವರ್ಷಗಳಲ್ಲಿ 2000ಕ್ಕೂ ಮಿಕ್ಕಿ ಮಕ್ಕಳ ಯಕ್ಷ ಪ್ರದರ್ಶನ ನೀಡಿದ ಕೀರ್ತಿ ಇವರದ್ದು. ಯಕ್ಷಗಾನ ಭಾಗವತ, ಗಮಕಿ, ಕವಿ, ನಟ-ನಿರ್ದೆಶಕ, ನಾಟಕಕಾರ, ಸಂಘಟಕನಾಗಿಯೂ ಗುರುತಿಸಿಕೊಂಡಿರುವ ಇವರು ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.

ಎಂ.ಕೆ.ರಮೇಶ್ ಆಚಾರ್ಯ:ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನ ರಂಗದ ಸರ್ವ ಸಮರ್ಥ ಸ್ತ್ರೀವೇಷ ಕಲಾವಿದರಾಗಿರುವ ಎಂ.ಕೆ.ರಮೇಶ್ ಆಚಾರ್ಯ ಅವರು ಯಕ್ಷಗಾನ ತಾಳ ಮದ್ದಳೆಯ ಅರ್ಥಧಾರಿ, ಯಕ್ಷಗುರು, ಪ್ರಸಂಗಕರ್ತರಾಗಿಯೂ ಗುರುತಿಸಿದ್ದಾರೆ. ಸಾಂಪ್ರದಾಯಿಕ ನೆಲೆಯಲ್ಲಿಯೇ ಪೌರಾಣಿಕ ಪಾತ್ರಗಳನ್ನು ಯಕ್ಷಗಾನ ರಂಗಭೂಮಿಯಲ್ಲಿ ಪ್ರದರ್ಶಿಸುವ. ಎಂ.ಕೆ‌.ಆಚಾರ್ಯ ಅವರು ಸ್ತ್ರೀಪಾತ್ರಕೊಪ್ಪುವ ರೂಪ, ಮಧುರ ಕಂಠ, ಆಂಗಿಕ ಲಾಲಿತ್ಯ, ಪ್ರಗಲ್ಭ ಪಾಂಡಿತ್ಯ, ಸಶಕ್ತ ರಂಗನಡೆಯೊಂದಿಗೆ ಸ್ತ್ರೀಪಾತ್ರಧಾರಿಯಾಗಿ ಜನಮೆಚ್ಚುಗೆ ಗಳಿಸಿದ್ದರು. ಮಂದಾರ್ತಿ, ಧರ್ಮಸ್ಥಳ, ಸುರತ್ಕಲ್, ಸಾಲಿಗ್ರಾಮ, ಸೌಕೂರು, ಪೆರ್ಡೂರು, ಮಂಗಳಾದೇವಿ ಮೇಳಗಳಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರ ಚಂದ್ರಮತಿ, ದ್ರೌಪದಿ, ರುಕ್ಮಿಣಿ, ಶಾಂತಲೆ, ಸೀತೆ, ಮೇನಕೆ, ಸೈರೇಂದ್ರಿ ಮೊದಲಾದ ಸ್ತ್ರೀಪಾತ್ರಗಳು ಕಲಾರಸಿಕರ ಮನೆಗೆದ್ದಿವೆ. ಉತ್ತಮ ಅರ್ಥಧಾರಿಯಾಗಿ, ಪ್ರಸಂಗಕರ್ತರಾಗಿಯೂ ಗುರುತಿಸಿಕೊಂಡಿರುವ ಇವರು ಅನೇಕ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನೂ ನೀಡಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕಲಾವಿದರಾಗಿದ್ದಾರೆ.

'ಪೀಠಿಕಾ ಪ್ರಕರಣ' ಗ್ರಂಥ:ಖ್ಯಾತ ಅರ್ಥಧಾರಿ ಹಾಗೂ ಲೇಖಕರಾಗಿರುವ ರಾಧಾಕೃಷ್ಣ ಕಲ್ಚಾರ್ ಅವರು ಈಗಾಗಲೇ ಪರಕಾಯ ಪ್ರವೇಶ, ಉಲಿಯ ಉಯ್ಯಾಲೆ, ಅರ್ಥಾಲೋಕ ಮೊದಲಾದ ಕೃತಿಗಳ ಮೂಲಕ ಪ್ರಸಿದ್ಧರಾಗಿದ್ದು 'ಪೀಠಿಕಾ ಪ್ರಕರಣ' ಇವರ ಇತ್ತೀಚೆಗಿನ ಒಂದು ಅಪೂರ್ವ ಕೃತಿಯಾಗಿದೆ. ಇದರಲ್ಲಿ ಮೂವತ್ತೆಂಟು ಪ್ರಸಂಗಗಲ್ಲಿ ಬರುವ ಆಯ್ದ ನೂರನಲ್ವತ್ತು ಪಾತ್ರಗಳ ಈ ಪೀಠಿಕೆ ಯಕ್ಷಗಾನ ಅರ್ಥಧಾರಿಗಳಿಗೆ ಮತ್ತು ವೇಷಧಾರಿಗಳಿಗೆ ಕೈ ದೀವಿಗೆಯಾಗಿದೆ. ಯಕ್ಷಗಾನ ಅರ್ಥಗಾರಿಕೆಯ ಮೌಲಿಕ ಸಂಗತಿಗಳನ್ನು, ವಿಶಿಷ್ಟ ಶಕ್ತಿ ಸಾಮರ್ಥ್ಯವನ್ನು ಕಲ್ಚಾರ್ ಅವರು ಈ ಪೀಠಿಕೆಗಳಲ್ಲಿ ನಿರೂಪಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು ವಿವಿ 42ನೇ ಘಟಿಕೋತ್ಸವ: ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ - mangaluru University convocation

ABOUT THE AUTHOR

...view details