ಕರ್ನಾಟಕ

karnataka

ETV Bharat / state

ಬೆಂಗಳೂರು: ಪಾರ್ಕ್​ನಲ್ಲಿ ಪ್ರಿಯತಮೆ ಜೊತೆ ಕುಳಿತಿದ್ದ ವ್ಯಕ್ತಿಗೆ ಯುವತಿಯ ಸ್ನೇಹಿತನಿಂದ ಚಾಕು ಇರಿತ - STABBED ON A MAN - STABBED ON A MAN

ಚಾಕು ಇರಿತಕ್ಕೊಳಗಾದ ವ್ಯಕ್ತಿ ಯುವತಿ ಹಾಗೂ ಆಕೆಯ ಸ್ನೇಹಿತನ ವಿರುದ್ಧ ದೂರು ನೀಡಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Sep 18, 2024, 3:08 PM IST

ಬೆಂಗಳೂರು: ಪಾರ್ಕ್​ನಲ್ಲಿ ಪ್ರಿಯತಮೆಯೊಂದಿಗೆ ಕುಳಿತಿದ್ದ ವ್ಯಕ್ತಿಗೆ ಯುವತಿಯ ಸ್ನೇಹಿತ ಚಾಕು ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಪ್ಟೆಂಬರ್ 15ರಂದು ಸದ್ದುಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ಕೆಇಬಿ ಪಾರ್ಕ್ ಬಳಿ ಘಟನೆ ನಡೆದಿದೆ. ಇರಿತಕ್ಕೊಳಗಾದ ಹಿತೇಂದ್ರ ಕುಮಾರ್ (58) ನೀಡಿರುವ ದೂರಿನನ್ವಯ ಯುವತಿ ಹಾಗೂ ಆಕೆಯ ಸ್ನೇಹಿತ ಸಿದ್ದು ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಜಯನಗರ 9ನೇ ಬ್ಲಾಕ್‌ನಲ್ಲಿ ಹಿತೇಂದ್ರ ಕುಮಾರ್ ಹೊಂದಿರುವ ಬಟ್ಟೆ ಅಂಗಡಿಯಲ್ಲಿ ಯುವತಿಯೊಬ್ಬಳು ಜೂನ್ ತಿಂಗಳಿನಲ್ಲಿ ಕೆಲಸಕ್ಕೆಂದು ಸೇರಿದ್ದಳು. ಆದರೆ 2-3 ತಿಂಗಳುಗಳ ಬಳಿಕ ಕೆಲಸ ಬಿಟ್ಟಿದ್ದಳು. ಯುವತಿಯ ಮೇಲೆ ಪ್ರೀತಿ ಹೊಂದಿದ್ದ ಹಿತೇಂದ್ರ ಕುಮಾರ್ ಸೆಪ್ಟೆಂಬರ್ 14ರಂದು ಆಕೆಯನ್ನು ಭೇಟಿಯಾಗಲು ಕರೆದಿದ್ದರು. ಅದರಂತೆ ಇಬ್ಬರೂ ಸಹ ಬಿಟಿಎಂ ಲೇಔಟ್‌ನ ಉಡುಪಿ ಗಾರ್ಡನ್ ಸಿಗ್ನಲ್ ಬಳಿಯಿರುವ ಕೆಇಬಿ ಪಾರ್ಕ್‌ನಲ್ಲಿ ಭೇಟಿಯಾಗಿದ್ದರು ಅನ್ನೋದನ್ನು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಯುವತಿಯ ಬಳಿ ಹಿತೇಂದ್ರ ಕುಮಾರ್ ತನ್ನ ಪ್ರೀತಿ ಹೇಳಿಕೊಂಡಿದ್ದ. ಆಕೆಯೂ ಸಹ ಹಿತೇಂದ್ರ ಕುಮಾರ್ ಪ್ರೀತಿಗೆ ಸಮ್ಮತಿಸಿದ್ದಳು. ಅದೇ ಖುಷಿಯಲ್ಲಿದ್ದ ಹಿತೇಂದ್ರ ಕುಮಾರ್ ಮಾರನೇ ದಿನವೂ ಸಹ ಯುವತಿಯನ್ನು ಅದೇ ಸ್ಥಳದಲ್ಲಿ ಭೇಟಿಗೆ ಕರೆದಿದ್ದ. ಅದೇ ಪಾರ್ಕ್‌ನಲ್ಲಿ ಮತ್ತೆ ಕುಳಿತು ಇಬ್ಬರೂ ಮಾತನಾಡುತ್ತಿದ್ದಾಗ ಏಕಾಏಕಿ ಯುವತಿಯ ಸ್ನೇಹಿತ ಚಾಕು ಸಮೇತ ಬಂದಿದ್ದ. ಈ ವೇಳೆ ಮೂರು ಜನರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು, ಹಿತೇಂದ್ರ ಕುಮಾರ್ ಹೊಟ್ಟೆ ಹಾಗೂ ಬೆನ್ನಿಗೆ ಆರೋಪಿ ಸಿದ್ದು ಚಾಕುವಿನಿಂದ ಇರಿದಿರುವ ಬಗ್ಗೆ ಎಫ್​ಐಆರ್ ದಾಖಲಾಗಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿತೇಂದ್ರ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯವತಿ ಹಾಗೂ ಆಕೆಯ ಸ್ನೇಹಿತನ ಉದ್ದೇಶಪೂರ್ವಕವಾಗಿ ಕೊಲೆಗೆ ಯತ್ನಿಸಿರುವುದಾಗಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸುದ್ದುಗುಂಟೆ ಠಾಣೆ ಪೊಲೀಸರು, ಯುವತಿ ಹಾಗೂ ಆಕೆಯ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಹಳೆ ವೈಷಮ್ಯ: ಬೆಳಗಾವಿಯಲ್ಲಿ ಮೂವರಿಗೆ ಚಾಕು ಇರಿತ, ಮೂವರು ಆರೋಪಿಗಳ ಬಂಧನ - Three Youths Stabbed

ABOUT THE AUTHOR

...view details