ದಾವಣಗೆರೆ: ಒಂದು ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬನ ಮೃತದೇಹ ರಸ್ತೆ ಬದಿಯ ಪೊದೆಯಲ್ಲಿ ಬೈಕ್ ಸಮೇತ ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿರುವ ಘಟನೆ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಬಳಿ ಬೆಳಕಿಗೆ ಬಂದಿದೆ. ಪತ್ತೆಯಾದ ಅಸ್ಥಿಪಂಜರ ಕಡ್ಲೇಬಾಳು ಗ್ರಾಮದ ತಿಪ್ಪೇಶ್ (45) ಅವರದು ಎಂದು ಗುರುತಿಸಲಾಗಿದೆ.
ಅಪಘಾತವಾಗಿ ರಸ್ತೆ ಬದಿ ಬಿದ್ದು ಸಾವನ್ನಪ್ಪಿರುವ ಶಂಕೆಯನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ತನ್ನ ಪತಿಯನ್ನು ಕೊಲೆ ಮಾಡಲಾಗಿದೆ ಎಂದು ತಿಪ್ಪೇಶ್ ಪತ್ನಿ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಪತ್ತೆ (ETV Bharat) ದಾವಣಗೆರೆ ಪೊಲೀಸ್ ಠಾಣೆಯ ಪಿಐ ಕಿರಣ್ ಮಾಹಿತಿ ನೀಡಿ, "ಇದು ಕೊಲೆ ಎಂದು ಮೃತ ತಿಪ್ಪೇಸ್ವಾಮಿ ಅವರ ಪತ್ನಿ ಗಂಗಮ್ಮ ಶಂಕೆ ವ್ಯಕ್ತಪಡಿಸಿ, ಕೊಲೆ ಪ್ರಕರಣ ಕೂಡ ದಾಖಲು ಮಾಡಿದ್ದಾರೆ. ಮೃತ ವ್ಯಕ್ತಿ ಒಂದು ತಿಂಗಳ ಹಿಂದೆ ವಿವಾಹಿತ ಮಹಿಳೆಯೊಂದಿಗೆ ಕಾಣೆಯಾಗಿದ್ದನು, ಅನೈತಿಕ ಸಂಬಂಧ ಕೂಡ ಇತ್ತು. ಇದೀಗ ದ್ವಿಚಕ್ರ ವಾಹನ ಸಮೇತ ಅಸ್ಥಿಪಂಜರ ಸಿಕ್ಕಿದೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ" ಎಂದರು.
ಪತ್ನಿ ಗಂಗಮ್ಮ ಮಾತನಾಡಿ "ಗ್ರಾಮದಲ್ಲಿ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಊರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬರಲೇ ಇಲ್ಲ. ಪತಿಯ ಸಾವಿಗೆ ವಿವಾಹಿತ ಮಹಿಳೆ ಮತ್ತು ಆಕೆ ಕುಟುಂಬವೇ ಕಾರಣ. ಗಂಡ ಕಾಣೆಯಾದ ದಿನದಿಂದ ವಿವಾಹಿತ ಮಳೆಯ ಕುಟುಂಬಸ್ಥರು ಕಾಣಿಸುತ್ತಿಲ್ಲ. ಅವರು ಮನೆ ಬಿಟ್ಟು ಹೋಗಿದ್ದಾರೆ. ಅಂದು ಕಾಣೆಯಾಗಿದ್ದರ ಬಗ್ಗೆ ದೂರು ದಾಖಲು ಮಾಡಿದ್ದೆವು. ಕಾಣೆಯಾದ ನಂತರ ಅವರಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬರ್ತಿತ್ತು. ನಮ್ಮ ನಾದಿನಿ ಕರೆ ಮಾಡಿದಾಗ ತಿಪ್ಪೇಶ್ ಧ್ಯಾನದಲ್ಲಿದ್ದಾರೆ ಎಂದು ಹೇಳಿ ಫೋನ್ ಕಟ್ ಮಾಡ್ತಾ ಇದ್ದರಂತೆ. ಹಾಗಾಗಿ ನಮಗೆ ಆ ಮಹಿಳೆಯ ಮೇಲೆ ಅನುಮಾನ ಇದೆ. ಆಕೆ ಮತ್ತು ಆಕೆಯ ಕುಟುಂಬದವರನ್ನು ವಿಚಾರಣೆ ಮಾಡಿ" ಎಂದು ಒತ್ತಾಯಿಸಿದರು.
ಅಸ್ಥಿಪಂಜರ ಬಟ್ಟೆಯಲ್ಲಿ ಕಟ್ಟಿಕೊಂಡು ಹೊರಟ ಕುಟುಂಬ:ರಸ್ತೆಬದಿಯಲ್ಲಿ ಸಿಕ್ಕ ತಿಪ್ಪೇಶ್ ಅಸ್ಥಿಪಂಜರವನ್ನು ಪಿಎಂ (ಪೋಸ್ಟ್ ಮಾರ್ಟಮ್) ಮಾಡಲು ಚಿಗಟೇರಿ ಶವಾಗಾರಕ್ಕೆ ಪೊಲೀಸರು ಸ್ಥಳಾಂತರಿಸಿದ್ದರು. ಇಂದು ಪಿಎಂ ಮಾಡಿದ ವೈದ್ಯರು ತಿಪ್ಪೇಶ್ ಅವರ ಅಸ್ಥಿಪಂಜರವನ್ನು ಒಂದು ಬಟ್ಟೆಯಲ್ಲಿ ಕಟ್ಟಿಕೊಟ್ಟರು. ಆ ಪುಟ್ಟ ಗಂಟು ಕೈಯಲ್ಲಿ ಹಿಡಿದ ಸಂಬಂಧಿಕರು ಮನೆಗೆ ತೆರಳಿದರು. ಈ ವೇಳೆ ಪತ್ನಿ ಗಂಗಮ್ಮ ಹಾಗು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಬೈಕ್ ಆರ್ಸಿ ಬುಕ್ ನೋಡಿ ಮೃತನ ಗುರು ಪತ್ತೆ:ಕಡ್ಳೆಬಾಳು ಗ್ರಾ.ಪಂ ಉಪಾಧ್ಯಕ್ಷ ಪ್ರಭಾಕರ್ ಪ್ರತಿಕ್ರಿಯಿಸಿ, "ಬೈಕ್ ಹಾಗು ಸಾವನ್ನಪ್ಪಿದ ವ್ಯಕ್ತಿ ತಿಪ್ಪೇಶ್ನ ಮೂಳೆಗಳು (ಅಸ್ಥಿಪಂಜರ) ಬಿಟ್ಟರೆ ಗುರುತು ಪತ್ತೆ ಸಿಕ್ಕಿದ್ದಿಲ್ಲ. ದ್ವಿಚಕ್ರ ವಾಹನದ ಆರ್ಸಿ ಬುಕ್ ಮೃತ ವ್ಯಕ್ತಿ ತಿಪ್ಪೇಶ್ ಎಂದು ಗುರುತಿಸಲು ಸಹಾಯ ಆಗಿದೆ. ಅಸ್ಥಿಪಂಜರ ದೊರೆತ ಬೆನ್ನಲ್ಲೇ ಪೊಲೀಸರು ಕಡ್ಲೆಬಾಳು ಗ್ರಾಮಕ್ಕೆ ಸಂಪರ್ಕಿಸಿ ಸಂಬಂಧಿಕರಿಗೆ, ಪತ್ನಿ ಗಂಗಮ್ಮಳಿಗೆ ವಿಚಾರ ತಿಳಿಸಿದ್ದಾರೆ. ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬಸ್ಥರು ಬಡವರಾಗಿದ್ದು, ಅವರಿಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದೇವೆ" ಎಂದರು.
ಇದನ್ನೂ ಓದಿ:ಉಡುಪಿ: ಹಣ ವಾಪಸ್ ನೀಡದ್ದಕ್ಕೆ ಸ್ನೇಹಿತನ ಕೊಲೆ