ಬೆಂಗಳೂರು: ಸರಿಯಾಗಿ ಬಟ್ಟೆ ಧರಿಸುವಂತೆ ಹೇಳು. ಇಲ್ಲದಿದ್ದರೆ ಆಕೆಯ ಮುಖಕ್ಕೆ ಆ್ಯಸಿಡ್ ಎರಚುವುದಾಗಿ ಮಹಿಳೆಯ ಪತಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಸಿದ್ದ ವ್ಯಕ್ತಿಯನ್ನು ಕಂಪನಿ ಕೆಲಸದಿಂದ ತೆಗೆದು ಹಾಕಿದೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕಂಪನಿ, ಆತನ ನಡತೆ ಒಪ್ಪುವಂಥದ್ದಲ್ಲ ಎಂದು ಹೇಳಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಿಖಿತ್ ಶೆಟ್ಟಿ ಎಂಬಾತನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ 5 ವರ್ಷಗಳ ಕಾಲ ಕೆಲಸದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಂಪನಿ ಮಾಹಿತಿ ನೀಡಿದೆ.
ನಿನಗಿಷ್ಟ ಬಂದ ಬಟ್ಟೆ ಧರಿಸಬೇಡ. ಸರಿಯಾಗಿ ಬಟ್ಟೆ ಹಾಕು. ಇಲ್ಲದಿದ್ದರೆ ಆ್ಯಸಿಡ್ ಎರಚುತ್ತೇನೆ ಎಂದು ಮಹಿಳೆಯ ಪತಿ ಶಹಬಾಜ್ ಅನ್ಸರ್ ಎಂಬವರಿಗೆ ಸಂದೇಶ ಕಳುಹಿಸಿದ್ದ. ಪತ್ರಕರ್ತನಾಗಿರುವ ಶಹಬಾಜ್ ತನ್ನ ಪತ್ನಿಯ ಕುರಿತು ಮೆಸೇಜ್ ಕಳುಹಿಸಿದ್ದರ ಬಗ್ಗೆ ಸ್ಕ್ರೀನ್ ಶಾಟ್ ಅನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ತನ್ನ ಪತ್ನಿ ಬಟ್ಟೆ ಧರಿಸುವ ಬಗ್ಗೆ ನಿರ್ಧರಿಸುವ ವ್ಯಕ್ತಿ ಯಾರು? ಬೆದರಿಕೆ ಸಂದೇಶ ಕಳುಹಿಸಿದವನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿಜಿಪಿ ಅಲೋಕ್ ಮೋಹನ್ ಅವರಿಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದರು.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಆರೋಪಿ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳು ಎಷ್ಟು ಸುರಕ್ಷಿತವಾಗಿದ್ದಾರೆ ಎಂದು ಶಹಬಾಜ್ ಪ್ರಶ್ನಿಸಿದ್ದರು.
ತಕ್ಷಣ ಎಚ್ಚೆತ್ತುಕೊಂಡ ಕಂಪನಿ ನಮ್ಮ ಕಂಪನಿಯಲ್ಲಿ ಉದ್ಯೋಗಿಯಾಗಿರುವ ನಿಖಿತ್ ಶೆಟ್ಟಿ ಎಂಬಾತ ಮಹಿಳೆಯನ್ನು ಗುರಿಯಾಗಿಸಿಕೊಂಡು ಬೆದರಿಕೆ ಸಂದೇಶ ಕಳುಹಿಸಿರುವುದು ಆತಂಕಕಾರಿ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ಆತನ ನಡತೆ ಒಪ್ಪುವುದಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಮಹಿಳಾ ಸುರಕ್ಷತೆಗೆ ಮೊದಲ ಆದ್ಯತೆ ನಮ್ಮ ಗುರಿ. ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ಕಳುಹಿಸಿರುವ ನಿಖಿತ್ ಶೆಟ್ಟಿಯನ್ನು ಕೂಡಲೇ ಐದು ವರ್ಷಗಳವರೆಗೆ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಸೋಷಿಯಲ್ ಇನ್ಫ್ಲುಯೆನ್ಸರ್ ಆಗಿರುವ ತನ್ನ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ನಿಂದನೆ ಸಂದೇಶಗಳು ಬರುತ್ತವೆ. ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಲಿಖಿತ್ ಶೆಟ್ಟಿ ಸಂದೇಶ ಭಯಹುಟ್ಟಿಸುವ ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಪ್ರಶ್ನಿಸುವಂತಾದ್ದಾಗಿತ್ತು ಎಂದು ಶಹಬಾಜ್ ತಿಳಿಸಿದ್ದಾರೆ. ಕೆಲಸದಿಂದ ಆರೋಪಿಯನ್ನು ವಜಾಗೊಳಿಸಿರುವುದನ್ನು ಶ್ಲಾಘಿಸಿದ್ದು, ನನ್ನೊಂದಿಗೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕಡಬ ವಿದ್ಯಾರ್ಥಿನಿಯರ ಆ್ಯಸಿಡ್ ದಾಳಿ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ - Kadaba Acid Attack Case