ಬೆಂಗಳೂರು: ನಗರದ ಪಂಚತಾರಾ ಹೋಟೆಲ್ವೊಂದರಲ್ಲಿ ಉಳಿದುಕೊಂಡು ಬಿಲ್ ಪೇ ಮಾಡಲು ನಕಲಿ ಪೇಮೆಂಟ್ ಸ್ಕ್ರೀನ್ ಶಾಟ್ ತೋರಿಸಿ, ಯಾಮಾರಿಸಲು ಮುಂದಾಗಿದ್ದ ವಂಚಕನನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗಾಲ್ಫ್ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್ನ ಮ್ಯಾನೇಜರ್ ಶಮೀರ್ ದೇಸಾಯಿ ಎಂಬುವರು ನೀಡಿದ ದೂರಿನ ಮೇರೆಗೆ ಕೋಲ್ಕತ್ತಾ ಮೂಲದ ಬೊರಡ ಸುನೀಲ್ ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿ ಮಾರ್ಚ್ 31ರಂದು ಆನ್ಲೈನ್ ಮೂಲಕ ಹೋಟೆಲ್ ರೂಮ್ ಬುಕ್ ಮಾಡಿದ್ದ. ಅಲ್ಲದೇ, ಏರ್ಪೋರ್ಟ್ನಿಂದ ಕರೆತರಲು ಬಿಎಂಡಬ್ಲ್ಯೂ ಕಾರು ಬೇಕು ಎಂದು ಸೂಚಿಸಿದ್ದ. ಈತನ ಮನವಿ ಮೇರೆಗೆ ಏರ್ಪೋರ್ಟ್ನಿಂದ ಹೋಟೆಲ್ನವರು ಕರೆತಂದಿದ್ದರು. ರೂಮಿನಲ್ಲಿ ಉಳಿದುಕೊಂಡ ಆರೋಪಿ 17,346 ರೂ. ಪಾವತಿಸಿರುವುದಾಗಿ ಹೋಟೆಲ್ ಸಿಬ್ಬಂದಿಗೆ ಪೇಮೆಂಟ್ ಮಾಡಿದ ನಕಲಿ ಸ್ಕ್ರಿನ್ ಶಾಟ್ ತೋರಿಸಿದ್ದಾನೆ. ಆದರೆ, ಹಣ ಸಂದಾಯ ಆಗದಿರುವ ಬಗ್ಗೆ ಸಿಬ್ಬಂದಿ ಪ್ರಶ್ನಿಸಿದಾಗ ತನ್ನ ಕಡೆಯಿಂದ ಹಣ ಪಾವತಿಯಾಗಿದೆ. ನಿಮ್ಮ ಕಡೆಯಿಂದ ಟೆಕ್ನಿಕಲ್ ಸಮಸ್ಯೆ ಇರಬಹುದು ಎಂದು ತಿಳಿಸಿದ್ದನಂತೆ.
ತಾಂತ್ರಿಕವಾಗಿ ತೊಂದರೆಯಾಗಿರಬಹುದು ಎಂದು ಭಾವಿಸಿದ ಸಿಬ್ಬಂದಿ ಸುಧೀರ್ಗೆ ರೂಮಿಗೆ ಹೋಗಲು ಅನುವು ಮಾಡಿದ್ದರು. ಮಾರನೇ ದಿನ ಸ್ಥಳೀಯವಾಗಿ ಓಡಾಡಲು ಬಿಎಂಡಬ್ಲ್ಯೂ ಕಾರು ಬೇಕು ಎಂದೂ ಕೂಡಾ ಸೂಚಿಸಿದ ಮೇರೆಗೆ ಹೋಟೆಲ್ನವರು ವ್ಯವಸ್ಥೆ ಮಾಡಿದ್ದರು. ಏಪ್ರಿಲ್ 1 ರಂದು ಓಡಾಡಿದ ಬಳಿಕ ಸಂಜೆ ನೇರವಾಗಿ ಏರ್ಪೋರ್ಟ್ಗೆ ಡ್ರಾಪ್ ಮಾಡುವಂತೆ ಕಾರು ಚಾಲಕನಿಗೆ ಸೂಚಿಸಿದ್ದ. ಆದರೆ, ಹೋಟೆಲ್ನಿಂದ ತನಗೆ ಅನುಮತಿ ನೀಡಿಲ್ಲ ಎಂದು ನಿರಾಕರಿಸಿದ ಚಾಲಕ ಆರೋಪಿಯನ್ನು ಮರಳಿ ಹೋಟೆಲ್ ಬಳಿ ಕರೆತಂದಿದ್ದ. ಬಳಿಕ ಕಾರು ಹಾಗೂ ರೂಮ್ ಬಾಡಿಗೆ ಸೇರಿ 80 ಸಾವಿರ ರೂ. ಪಾವತಿಸುವಂತೆ ಹೊಟೇಲ್ ಸಿಬ್ಬಂದಿ ಸೂಚಿಸಿದ್ದರು.