ಬೆಂಗಳೂರು: ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆಯ ಪಿತೃಪಕ್ಷ ಹಬ್ಬ ಬರುತ್ತಿದ್ದು, ಅಂದು ಮಾಂಸ ಮಾರಾಟ ನಿಷೇಧ ಇರುವುದರಿಂದ ಪಿತೃಪಕ್ಷ ಹಬ್ಬ ಆಚರಿಸಲು ಅಡ್ಡಿಯಾಗುತ್ತಿದೆ. ಹೀಗಾಗಿ ವಿಶೇಷ ಸಂದರ್ಭವೆಂದು ಪರಿಗಣಿಸಿ ಮಾಂಸ ಮಾರಾಟ ನಿಷೇಧ ಆದೇಶ ಹಿಂಪಡೆಯುವಂತೆ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಬಿ.ಎಂ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ಪತ್ರದಲ್ಲಿ, "ಪ್ರತಿ ವರ್ಷ ಮಹಾಲಯ ಅಮಾವಾಸ್ಯೆಯ ಹಬ್ಬದ ದಿನದಂದು ರಾಜ್ಯದ ಕೋಟ್ಯಾಂತರ ಜನರು, ಮಾಂಸಾಹಾರ ಸಿದ್ಧಪಡಿಸಿ ತಮ್ಮ ಹಿರಿಯರಿಗೆ ಎಡೆ ಹಾಕಿ, ಪೂಜೆ ಮಾಡಿ ಬಂಧು ಬಳಗ, ಸ್ನೇಹಿತರೊಂದಿಗೆ ಊಟ ಮಾಡುವ ಮೂಲಕ ಹಬ್ಬವನ್ನು ಆಚರಿಸುವುದು ಹಲವಾರು ಶತಮಾನಗಳಿಂದ ರೂಢಿಯಲ್ಲಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಾಕತಾಳೀಯವೆಂಬಂತೆ ಈ ವರ್ಷದ "ಪಿತೃಪಕ್ಷದ ಮಹಾಲಯ ಅಮಾವಾಸ್ಯೆಯ ಹಬ್ಬ" ಗಾಂಧಿಜಯಂತಿ ದಿನವೇ ಬಂದಿದ್ದು, ಆ ದಿನ ಮಾಂಸ ಮಾರಾಟಕ್ಕೆ ನಿಷೇಧ ಇರುವುದರಿಂದ ರಾಜ್ಯದ ಕೋಟ್ಯಂತರ ಜನರು ಹಿಂದಿನಿಂದಲೂ ರೂಢಿಯಲ್ಲಿರುವ ಹಬ್ಬದ ಆಚರಣೆಗೆ ಅಡಚಣೆಯಾಗಲಿದೆ ಎಂಬ ಆತಂಕದಲ್ಲಿದ್ದಾರೆ" ಎಂದು ತಿಳಿಸಿದ್ದಾರೆ.