ಶಿವಮೊಗ್ಗ: ಇಂದು ನಗರದ ಡಿಎಆರ್ ಮೈದಾನದಲ್ಲಿ ಸಚಿವ ಮಧು ಬಂಗಾರಪ್ಪ 75ನೇ ಗಣರಾಜ್ಯೋತ್ಸವ ಧ್ವಜರೋಹಣ ನೆರವೇರಿಸಿದರು. ವಂದನೆ ಸ್ವೀಕರಿಸಿದ ಮಧು ಬಂಗಾರಪ್ಪ ಪರೇಡ್ ವೀಕ್ಷಣೆ ಮಾಡಿದರು. ಪೊಲೀಸ್ ಸೇರಿದಂತೆ ವಿವಿಧ ಶಾಲಾ ಮಕ್ಕಳು ಆಕರ್ಷಕ ಪಥಸಂಚಲನ ನಡೆಸಿದರು. ಇದೇ ವೇಳೆ, ರಾಷ್ಟ್ರಪತಿ ಪದಕ ಪಡೆದ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ ಭೂಮರೆಡ್ಡಿ ಅವರಿಗೆ ಸನ್ಮಾನ ಮಾಡಲಾಯಿತು. ಡಿಸಿ, ಎಸ್ಪಿ, ಎಡಿಸಿ, ಎಸಿ ಹಾಗೂ ತಹಶೀಲ್ದಾರ್ ಹಾಜರಿದ್ದರು.
ರಾಷ್ಟ್ರಪತಿ ಪದಕ ಪಡೆದ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ ಭೂಮರೆಡ್ಡಿ ಬಳಿಕ ಮಾತನಾಡಿದ ಅವರು, ನಮ್ಮ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ಸವಿ ನೆನಪಿಗೆ ಇಂದು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 28 ದಿನಗಳ ಕಾಲ ಸಂವಿಧಾನ ಜಾಗೃತಿ ಸ್ತಬ್ದ ಚಿತ್ರವನ್ನು ರಾಜ್ಯಾದ್ಯಂತ ಪ್ರದರ್ಶಿಸಿ ಫೆ. 24 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜ.26 ನಾವು ಸರ್ವತಂತ್ರ ಸ್ವತಂತ್ರರು ಎಂದು ಘೋಷಿಸಿಕೊಂಡ ಸುದಿನವಾಗಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮದೇ ದೇಶ, ನಮ್ಮದೇ ಸಂವಿಧಾನ, ನಮ್ಮದೇ ಆಡಳಿತ, ಎನ್ನುವ ಶಪಥ ಕೈಗೊಂಡ ಪವಿತ್ರ ದಿನ. ಸ್ವತಂತ್ರ ಭಾರತಕ್ಕೆ ಒಂದು ಸದೃಢ ಸಂವಿಧಾನ ಕಟ್ಟಿಕೊಟ್ಟ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ನೇತೃತ್ವದ ಹಿರಿಯರ ತಂಡವನ್ನು ನೆನಪಿಸಿಕೊಳ್ಳಬೇಕಿದೆ. ಅವರ ಅವಿರತ ಪ್ರಯತ್ನದ ಫಲವಾಗಿ ವಿಶ್ವಕ್ಕೆ ಮಾದರಿ ಆಗಿರುವ ನಮ್ಮ ಸಂವಿಧಾನ ರೂಪುಗೊಂಡಿದೆ. ನಮ್ಮ ಗಣರಾಜ್ಯದ ಇಂದಿನ ಅಸ್ತಿತ್ವಕ್ಕೆ ನಮ್ಮ ಸಂವಿಧಾನವೇ ತಳಹದಿ ಆಗಿದೆ ಎಂದು ಹೇಳಿದರು.
75ನೇ ಗಣರಾಜ್ಯೋತ್ಸವದಲ್ಲಿ ಸಚಿವ ಮಧು ಬಂಗಾರಪ್ಪ ಭಾಗಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗೆ ಕ್ರಮ :ಪ್ರಸಕ್ತ ಸಾಲಿನಿಂದ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳ ಜೊತೆಗೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೂ ಬಿಸಿಯೂಟ, ಮೊಟ್ಟೆ, ಚಕ್ಕಿ ಹಾಗೂ ಬಾಳೆಹಣ್ಣು ವಿತರಿಸಲಾಗುತ್ತಿದೆ. ಮುಂದೆ ವಾರಕ್ಕೆ 1 ಮೊಟ್ಟೆ ಬದಲಾಗಿ 2 ಮೊಟ್ಟೆಗಳನ್ನು ನೀಡಲಾಗುತ್ತಿದೆ. 13,682 ಪದವೀಧರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ. ರಾಜ್ಯದಲ್ಲಿನ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಎಲ್ಲ ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಸಿಎಸ್ಆರ್ ನಿಧಿಯ 500 ಶಾಲೆಗಳ ಉನ್ನತೀಕರಣಕ್ಕೆ ಬಳಸಲು ಯೋಜಿಸಿದ್ದು, ಈ ಬಗ್ಗೆ ಡಿಸಿಎಂ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
75ನೇ ಗಣರಾಜ್ಯೋತ್ಸವದಲ್ಲಿ ಸಚಿವ ಮಧು ಬಂಗಾರಪ್ಪ ಭಾಗಿ ವೈದ್ಯಕೀಯ ಸೌಲಭ್ಯ :ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಯನ್ನು 49 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಪ್ರಾರಂಭಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಕ್ರಿಟಿಕಲ್ ಕೇರ್ ಘಟಕ ತೆರೆಯಲು 20 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಆಯುಷ್ ವಿಶ್ವ ವಿದ್ಯಾಲಯ ಪ್ರಾರಂಭಿಸಲು ಸರ್ಕಾರವು ಅನುಮತಿ ನೀಡಿದ್ದು, 20 ಕೋಟಿ ರೂ. ಪ್ರಾರಂಭಿಕ ಅನುದಾನವನ್ನು ಬಿಡುಗಡೆ ಮಾಡಿದೆ. ಶಿವಮೊಗ್ಗ ವೈದ್ಯಕೀಯ ಕಾಲೇಜ್ (ಸಿಮ್ಸ್) ಮೇಲ್ದರ್ಜೆಗೆರಿಸಲು ಕ್ರಮಕೈಗೊಳ್ಳುವುದರೊಂದಿಗೆ ಜಿಲ್ಲೆಯಲ್ಲಿನ ಆಸ್ಪತ್ರೆಗಳ ಸುಧಾರಣೆಗೆ ಒತ್ತು ನೀಡಲಾಗುತ್ತದೆ ಎಂದರು.
ಮಾದರಿ ಜಿಲ್ಲೆಯನ್ನಾಗಿಸುವ ಗುರಿ :ಶಿವಮೊಗ್ಗ ಜಿಲ್ಲೆಯನ್ನು ಮಾದರಿಯ ಜಿಲ್ಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯು ಸಮಾಜವಾದದ ತವರೂರಾಗಿದ್ದು, ಸಮಾಜವಾದಿ ಗೋಪಾಲಗೌಡರ ಸ್ಮರರ್ಣಾರ್ಥ ಸ್ಮಾರಕ ಮತ್ತು ಊಳುವವನೇ ಹೊಲದ ಒಡೆಯ ಹೋರಾಟದ ಸವಿನೆನಪಿಗಾಗಿ ಕಾಗೋಡು ಸತ್ಯಾಗ್ರಹದ ಸ್ಮಾರಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ತೋಟಗಾರಿಕೆ ಬೆಳೆಗಳಿಗೆ ಪ್ರತಿವರ್ಷ ಕಂಟಕಪ್ರಾಯವಾಗಿದ್ದ ಎಲೆಚುಕ್ಕೆ ರೋಗದ ನಿಯಂತ್ರಣಕ್ಕಾಗಿ ಸಮಾಲೋಚನೆ ನಡೆಸಲಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸರ್ಕಾರವು ಸಂಶೋಧನೆಗೆ ಕೆಳದಿ ಶಿವಪ್ಪ ನಾಯಕ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಮೊದಲ ಕಂತಿನಲ್ಲಿ 43.61 ಲಕ್ಷ ರೂ. ಬಿಡುಗಡೆ ಮಾಡಿದೆ.
ಜಿಲ್ಲೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಉಳಿದಿರುವ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗರ್‌ಹುಕುಂ ಸಾಗುವಳಿದಾರು ಮತ್ತು ಅರಣ್ಯ ವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಆಸಕ್ತಿವಹಿಸಿದೆ. ಸದರಿ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಉನ್ನತ ಮಟ್ಟದ ಸಭೆಯನ್ನು ಸಿಎಂ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಹೊಸ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಅನುದಾನ ಕಾದಿರಿಸಲು ಕೋರಲಾಗಿದೆ.
ಮಲೆನಾಡಿನ ಭಾಗದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಕಂಡು ಬರುವ ಮಂಗನ ಕಾಯಿಲೆಯ ನಿಯಂತ್ರಣಕ್ಕಾಗಿ ಮಹತ್ವದ ನಿರ್ಣಯ ಕೈಗೊಳ್ಳಲು ಸಿಎಂ ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಲ್ಲದೇ ಸೋಂಕಿತರ ಸುರಕ್ಷತೆಗಾಗಿ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ. ವಚನ ಸಾಹಿತ್ಯದ ಮೂಲಕ ಅಧ್ಯಾತ್ಮ ಮತ್ತು ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾರಿದ 12 ನೇ ಶತಮಾನದ ಶರಣ, ಅನುಭವ ಮಂಟಪದ ಮೊದಲ ಪೀಠಾಧ್ಯಕ್ಷ ಅಲ್ಲಮ ಪ್ರಭುಗಳ ಜನ್ಮಸ್ಥಳ ಬಳ್ಳಿಗಾವಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ನಮ್ಮ ಕೋರಿಕೆಯಂತೆ ನಗರದ ಹೃದಯ ಭಾಗದಲ್ಲಿರುವ ಸ್ವಾತಂತ್ರ ಉದ್ಯಾನದ ಆವರಣಕ್ಕೆ ಅಲ್ಲಮಪ್ರಭುಗಳ ಹೆಸರನ್ನು ನಾಮಕರಣ ಮಾಡಲಾಗಿದೆ. ಜಗದ್ಗುರು ಶ್ರೀ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸಿಎಂ ಘೋಷಣೆ ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.
ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಿಗೆ ಅಮೃತ್-2 ಯೋಜನೆಯಡಿ ಕುಡಿಯುವ ನೀರಿನ ಪೂರೈಕೆಗಾಗಿ ಒಟ್ಟು 172.92 ಕೋಟಿ ರೂ. ಅನುದಾನ, ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ 22 ಕೋಟಿ ರೂ. ಮತ್ತು ಫುಡ್ ಪಾರ್ಕ್ ನಿರ್ಮಾಣಕ್ಕೆ 100 ಎಕರೆ ಜಾಗ ಮಂಜೂರಾಗಿದೆ. ಮುಂದಿನ ಬಜೆಟ್‌ನಲ್ಲಿ ಅನುದಾನ ಕಾದಿರಿಸಲು ಕೋರಲಾಗಿದೆ. ಕೈಗಾರಿಕಾ ಬೆಳವಣಿಗೆ, ಪ್ರವಾಸೋಧ್ಯಮ ಅಭಿವೃದ್ಧಿಗಾಗಿ ಉನ್ನತ ಮಟ್ಟದ ಸಭೆಯನ್ನು ನಡೆಸಲಾಗಿದೆ. ಶಿವಮೊಗ್ಗ ಘೋಕಸ್ ಕಾರ್ಯಕ್ರಮ ಹಾಗೂ ಕೈಗಾರಿಕಾ ಮೇಳ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಉದ್ಯೋಗ ಮೇಳ ಮತ್ತು ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಜನರ ಜೀವನಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಇದನ್ನೂ ಓದಿ :ಸರ್ಕಾರ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ, ಬದ್ಧತೆ ಮೆರೆದಿದೆ: ರಾಜ್ಯಪಾಲ ಗೆಹ್ಲೋಟ್