ಬೆಂಗಳೂರು:ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಬಿಜೆಪಿ ಪಕ್ಷಕ್ಕೆ ಹಲವು ನಾಯಕರು ಸೇರ್ಪಡೆಯಾದರು. ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಗುರುಸಿದ್ದನಗೌಡ, ಡಾ.ರವಿಕುಮಾರ್ ಅವರು ಬಿಜೆಪಿ ಸೇರಿದ್ದಾರೆ. ಪಕ್ಷದ ಧ್ವಜ ನೀಡುವ ಮೂಲಕ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬರಮಾಡಿಕೊಂಡರು.
ಲೋಕಾಯುಕ್ತ ದಾಳಿಯ ನಂತರ ಮಾಡಾಳ್ ವಿರೂಪಾಕ್ಷಪ್ಪ ಕುಟುಂಬಕ್ಕೆ ಟಿಕೆಟ್ ನೀಡದಂತೆ ಒತ್ತಡ ಬಂದ ಹಿನ್ನೆಲೆಯಲ್ಲಿ ಮಾಡಾಳು ಮಲ್ಲಿಕಾರ್ಜುನ್ಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೂ ಪಕ್ಷೇತರವಾಗಿ ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹಾಗಾಗಿ ಅವರನ್ನು 6 ವರ್ಷ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿತ್ತು. ಆದರೆ ವರ್ಷ ಪೂರ್ಣಗೊಳ್ಳುವ ಮೊದಲೇ ಇಂದು ಉಚ್ಚಾಟನೆ ವಾಪಸ್ ಪಡೆದು ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವ ಮೂಲಕ ಚನ್ನಗಿರಿ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆ ನಿರ್ಧಾರಕ್ಕೆ ಬರಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, "ರಾಜ್ಯದಲ್ಲಿ ರಾಜಕೀಯ ಚಿತ್ರಣ ಮೂರ್ನಾಲ್ಕು ತಿಂಗಳಿನಲ್ಲಿ ಸಾಕಷ್ಟು ಬದಲಾಗಿದೆ. ಆಡಳಿತಾರೂಢ ಕಾಂಗ್ರೆಸ್ಗೆ ರಾಜ್ಯದಲ್ಲಿ 2 ಸ್ಥಾನ ಗೆಲ್ಲಲಾಗದ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸಂದರ್ಭದಲ್ಲೂ ವಿಧಾನಸಭೆಗೆ ಚುನಾವಣೆ ನಡೆದರೆ ಬಿಜೆಪಿಗೆ 130ಕ್ಕಿಂತ ಹೆಚ್ಚು ಸ್ಥಾನ ಸಿಗುವ ವಾತಾವರಣ ನಿರ್ಮಾಣವಾಗಿದೆ" ಎಂದು ತಿಳಿಸಿದರು.
ಮಾಡಾಳ್ ಬಿಜೆಪಿ ಸೇರ್ಪಡೆಗೆ ಒತ್ತಡ ಇತ್ತು:"ನಾನು ರಾಜ್ಯಾಧ್ಯಕ್ಷನಾದ ಮೇಲೆ ಮಾಡಾಳ್ ಮಲ್ಲಿಕಾರ್ಜುನರನ್ನು ಬೇಗ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಡ ಇತ್ತು. ಇಂದು ಆ ಕಾರ್ಯ ಪೂರ್ಣಗೊಂಡಿದೆ. ಇತ್ತೀಚೆಗೆ ಜಗದೀಶ್ ಶೆಟ್ಟರ್ ಕೂಡ ಕಾಂಗ್ರೆಸ್ ತೊರೆದು, ಬಿಜೆಪಿ ಬಂದಿದ್ದರು" ಎಂದು ಹೇಳಿದರು.