ಹಾವೇರಿ: ಅವರೆಲ್ಲಾ ತಮ್ಮ ಮನೆದೇವರು ದರ್ಶನಕ್ಕೆ ತೆರಳಿ ದರ್ಶನ ಪಡೆದು ಮರಳಿ ಗ್ರಾಮಕ್ಕೆ ತೆರಳುತ್ತಿದ್ದರು. ಇನ್ನೇನು ಎರಡ್ಮೂರು ಗಂಟೆಯಲ್ಲಿ ಚಲಿಸಿದ್ದರೆ ಅವರ ಸ್ವಂತ ಊರು ಸೇರುತ್ತಿದ್ದರು. ಆದರೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ರಸ್ತೆ ಬದಿ ನಿಂತಿದ್ದ ಲಾರಿ ಯಮನಾಗಿ ಪರಿಣಮಿಸಿದೆ. ಸ್ವಗ್ರಾಮಕ್ಕೆ ತೆರಳುತ್ತಿದ್ದ 17 ಜನರಿದ್ದ ಟಿಟಿ ವಾಹನವು ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ 11 ಜನ ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಾಲ್ಕು ಜನ ಗಾಯಗೊಂಡಿದ್ದು ಅವರಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಇಂದು ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಮತ್ತು ಬೀರೂರು ಹಾಗೂ ಹನುಮಂತಪುರದ ನಿವಾಸಿಗಳು ಅಪಘಾತದಲ್ಲಿ ಮೃತಪಟ್ಟವರು. ಪರಶುರಾಮ್ (45), ಭಾಗ್ಯ (40), ನಾಗೇಶ್ (50), ವಿಶಾಲಾಕ್ಷಿ (50), ಸುಭದ್ರಾಬಾಯಿ (65), ಪುಣ್ಯ (50), ಮಂಜುಳಾಬಾಯಿ (62), ಚಾಲಕ ಆದರ್ಶ (23), ಮಾನಸಾ (24), ರೂಪಾ (40), ಮಂಜುಳಾ (50), ಆರ್ಯ (4) ಮತ್ತು ನಂದನ್ (6) ಮೃತ ದುರ್ದೈವಿಗಳು.
ಲಾರಿ ಚಾಲಕ ಅರೆಸ್ಟ್: ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದ್ದೇ ದುರಂತಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಲಾರಿ ಚಾಲಕ 62 ವರ್ಷದ ರಮೇಶ್ ಮತ್ತು ಕ್ಲೀನರ್ 23 ವರ್ಷದ ಪ್ರಜ್ವಲ್ನನ್ನ ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಚಿಕ್ಕಮಗಳೂರು ನಿವಾಸಿಗಳು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 48 ರ ಬದಿಯಲ್ಲಿ ಲೋಡ್ ಮಾಡಿದ್ದ ಲಾರಿಯನ್ನ ಚಾಲಕ ನಿಲ್ಲಿಸಿದ್ದ. ಈ ಲಾರಿಗೆ ಟೆಂಪೋ ಟ್ರಾವೆಲರ್ ಹಿಂದಿನಿಂದ ಡಿಕ್ಕಿಹೊಡೆದಿತ್ತು.