ಬೀದರ್ : ಕೃಷಿಯೇತರ ಜಮೀನಿನ ಶೇ. 60ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿ, ಅವುಗಳ ಮಾರಾಟಕ್ಕೆ ಅನುಮತಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಆಯುಕ್ತರು ಹಾಗೂ ಬುಡಾ ಸದಸ್ಯ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ಚಿಮಕೋಡೆ ಹಾಗೂ ಸದಸ್ಯ ಚಂದ್ರಕಾಂತ್ ರೆಡ್ಡಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದವರು. ಬೀದರ್ ನಗರದ ಚಿಕ್ಕಪೇಟೆಯಲ್ಲಿ ಸರ್ವೇ ನಂಬರ್ 26ರಲ್ಲಿ ಕೃಷಿಯೇತರ ಜಮೀನಿನ ಶೇ. 60ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿ, ಅವುಗಳ ಮಾರಾಟಕ್ಕೆ ಅನುಮತಿ ಕೊಡಲು ಶ್ರೀಕಾಂತ ಹಾಗೂ ಚಂದ್ರಕಾಂತ ಅವರು ₹50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಮುಂಗಡವಾಗಿ 10 ಲಕ್ಷ ರೂ. ಕೊಡುವುದರ ಬಗ್ಗೆ ಮಾತುಕತೆಯಾಗಿತ್ತು. ಬೀದರ್‌ನ ಪ್ರತಾಪ್ ನಗರದ ಬಳಿ ಲಂಚದ ಹಣ ತೆಗೆದುಕೊಳ್ಳುತ್ತಿದ್ದ ಶ್ರೀಕಾಂತ ಹಾಗೂ ಚಂದ್ರಕಾಂತ ರೆಡ್ಡಿ ಅವರ ಆಪ್ತ ಸಿದ್ದೇಶ್ವರ್ ಅವರನ್ನ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಆ ಬಳಿಕ ನಗರದ ಸ್ವಪ್ನಾ ಹೋಟೆಲ್ ಬಳಿ ಶ್ರೀಕಾಂತ ಹಾಗೂ ಚಂದ್ರಕಾಂತ ಅವರನ್ನೂ ವಶಕ್ಕೆ ಪಡೆಯಲಾಗಿದೆ. 10 ಲಕ್ಷ ಹಣ ಜಪ್ತಿ ಮಾಡಿಕೊಂಡಿರುವ ಲೋಕಾಯುಕ್ತ ಪೊಲೀಸರು, ಮೂವರನ್ನು ನಗರದ ಬಾಲಭವನದ ಬಳಿ ಇರುವ ಲೋಕಾಯುಕ್ತ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಸತೀಶ್ ನೌಬಾದೆ ಎಂಬವರು ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಇದನ್ನೂ ಓದಿ :ಲೋಕಾಯುಕ್ತ ದಾಳಿ: ಬೆಳಗ್ಗೆಯಿಂದ ನಡೆದ ರೇಡ್ ವಿವರ ನೀಡಿದ ಅಧಿಕಾರಿಗಳು, ಹೀಗಿದೆ ಸಂಪೂರ್ಣ ಮಾಹಿತಿ