ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದ ಪರಿಣಾಮ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಸಹೋದರಿಯರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಥಣಿಸಂದ್ರ ಮುಖ್ಯ ರಸ್ತೆಯ ಸರಾಯಿಪಾಳ್ಯದ ಬಳಿ ಶನಿವಾರ ಸಂಭವಿಸಿದೆ.
ನಿಗಾರ್ ಸುಲ್ತಾನಾ (32) ಹಾಗೂ ನಿಗಾರ್ ಇರ್ಫಾನ್ (30) ಮೃತ ಮಹಿಳೆಯರು. ಘಟನಾ ಸ್ಥಳಕ್ಕೆ ಹೆಣ್ಣೂರು ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರಿಬ್ಬರೂ ಗೋವಿಂದಪುರದಿಂದ ಥಣಿಸಂದ್ರ ಮಾರ್ಗವಾಗಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಕಾರಿನ ಚಾಲಕ ಏಕಾಏಕಿ ನಿಲ್ಲಿಸಿದ್ದಾನೆ. ಅದರಿಂದ ಗಾಬರಿಗೊಂಡ ದ್ವಿಚಕ್ರ ವಾಹನದ ಸವಾರೆ, ಬಲಕ್ಕೆ ತನ್ನ ಸ್ಕೂಟರ್ ತಿರುಗಿಸಿದ್ದಾಳೆ. ಅದೇ ಸಂದರ್ಭದಲ್ಲಿ ಸ್ಕೂಟರ್ ಹಿಂದಿನಿಂದ ವೇಗವಾಗಿ ಬಂದ ಕಸದ ಲಾರಿ ಡಿಕ್ಕಿಯಾಗಿದೆ. ಬಳಿಕ ಚಾಲಕನ ನಿಯಂತ್ರಣಕ್ಕೆ ಸಿಗದ ಲಾರಿ ನೆಲಕ್ಕೆ ಬಿದ್ದಿದ್ದ ಸಹೋದರಿಯರ ಮೇಲೆ ಹರಿದಿದೆ. ಪರಿಣಾಮ ಇಬ್ಬರೂ ಸಹ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
''ಮೃತ ನಿಗಾರ್ ಸುಲ್ತಾನಾಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ನಮಗೆ ಮೂವರು ಹೆಣ್ಣು ಹಾಗೂ ಓರ್ವ ಗಂಡು ಮಗನಿದ್ದಾನೆ. ನನ್ನ ಹಿರಿಯ ಮಗನ ಜನ್ಮದಿನಕ್ಕೆ ಶಾಪಿಂಗ್ ಮಾಡಲು ಬಂದಿದ್ದ ಅಕ್ಕ - ತಂಗಿಯರು, ನಂತರ ಆಸ್ಪತ್ರೆಗೆ ಹೋಗಿ ಬರಲು ಹೊರಟಿದ್ದರು. ಮನೆಯಿಂದ ಬಂದ ಅರ್ಧಗಂಟೆಯೊಳಗೆ ಈ ರೀತಿ ಆಗಿದೆ. ಚಾಲಕ ಮದ್ಯಪಾನ ಮಾಡಿ ಲಾರಿ ಚಲಾಯಿಸಿದ್ದರಿಂದ ಅಪಘಾತವಾಗಿದೆ'' ಎಂದು ಮೃತ ನಿಗಾರ್ ಇರ್ಫಾನ್ ಪತಿ ಇಮ್ರಾನ್ ಸೈಯ್ಯದ್ ತಿಳಿಸಿದ್ದಾರೆ.
ಘಟನೆ ಸಂಬಂಧ ಹೆಣ್ಣೂರು ಸಂಚಾರ ಪೊಲೀಸರು ಕಸದ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಚಾಲಕನ ದುರ್ನಡತೆಯಿಂದಾಗಿ ಆಟೋದಿಂದ ಮಹಿಳೆ ಜಿಗಿದ ಪ್ರಕರಣ; ಆರೋಪಿಯ ಬಂಧನ