ಬೆಂಗಳೂರು: ''ಸುಪಾರಿ ಕೊಡುವ ಕೆಟ್ಟ ಕೆಲಸ ಏನು ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಗೌರವ ಕೊಡುತ್ತೇವೆ ಅಂತ ಬಾಯಿಗೆ ಬಂದಂತೆ ಮಾತಾಡುವುದಲ್ಲ'' ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪಾರಿ ಕೊಟ್ಟಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ನಿಮ್ಮ ತಂದೆ ಏನು ಮಾಡಿದ್ದಾರೆ. ಪೂಜ್ಯ ತಂದೆ ಅಂದುಬಿಟ್ಟ ಮಾತ್ರಕ್ಕೆ ಪೂಜ್ಯ ಆಗಿಬಿಡಲ್ಲ. ನಾವು ಬುದ್ದ, ಬಸವ, ಅಂಬೇಡ್ಕರ್ ಮೇಲೆ ನಂಬಿಕೆ ಇಟ್ಟವರು. ನಾವು ಬೀದಿಗೆ ಇಳಿದರೆ ನೀವು ಮನೆ ಖಾಲಿ ಮಾಡಬೇಕಾಗುತ್ತೆ. ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತಾಡಿ'' ಎಂದು ಕಿಡಿಕಾರಿದರು.
ಬಿಜೆಪಿಯವರು ಹೇಳಿದಾಗೆಲ್ಲ ಕೇಳಲು ಆಗಲ್ಲ: ''ಪ್ರತಿಭಟನೆಗೆ ಬನ್ನಿ ಅಂತಾ ಮೃತ ಗುತ್ತಿಗೆದಾ ಸಚಿನ್ ಕುಟುಂಬವನ್ನು ಬಿಜೆಪಿಯವರು ಬಲವಂತ ಮಾಡುತ್ತಿದ್ದಾರೆ. ಪದೇ ಪದೆ ಫೋನ್ ಮಾಡಿ ಸರ್ಕಾರದ ವಿರುದ್ದ ಹೇಳಿಕೆ ಕೊಡಿಸುತ್ತಿದ್ದಾರೆ. ಆಗ ಸಂತೋಷ್ ಪಾಟೀಲ್ ಕುಟುಂಬಕ್ಕೆ ಬಿಜೆಪಿಯವರು ಸಹಾಯ ಮಾಡಬೇಕಿತ್ತು. ಪ್ರಕರಣ ಸಂಬಂಧ ಸಿಐಡಿ ತನಿಖೆ ಶುರುವಾಗಿ ಎರಡು ದಿನಗಳು ಆಗಿದೆ. ಈಗಾಗಲೇ ಮಹಜರು ಮಾಡಿದ್ದಾರೆ. ಪಾರದರ್ಶಕ ತನಿಖೆ ಸರ್ಕಾರದ್ದಾಗಿದೆ. ಸಿಬಿಐ ತನಿಖೆಗೆ ಕೊಡಬೇಕು ಅಂತಾ ಬಿಜೆಪಿಯವರು ಹೇಳಿದಾಗೆಲ್ಲ ಕೇಳಲು ಆಗಲ್ಲ'' ಎಂದರು.
''ಗಂಗಾ ಕಲ್ಯಾಣ ಹಗರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ರಾ?. ಪಿಎಸ್ಐ ಹಗರಣವನ್ನು ಕೊಟ್ಟಿದ್ರಾ?. ಇವರ ಅವಧಿಯಲ್ಲಿ ಎಷ್ಟು ಕೇಸ್ಗಳನ್ನು ಸಿಬಿಐಗೆ ಕೊಟ್ಟಿದ್ದಾರೆ?. ಮಾನವ ಸಂಪನ್ಮೂಲ ಇಲ್ಲ ಸುಮ್ಮನೆ ಕೊಡಬೇಡಿ ಅಂತಾ ಸಿಬಿಐನವರೇ ಹೇಳಿದ್ದಾರೆ. ಇವರು ಹೇಳಿದಂತೆ ಮಾಡುವುದಕ್ಕೆ ಇರುವುದಾ ನಾವು?. ಅವರ ಸ್ಕ್ರಿಫ್ಟ್ಗೆ ನಾವು ಕುಣಿಯುವುದಕ್ಕೆ ಆಗುತ್ತಾ?. ಪ್ರತಿಪಕ್ಷದಲ್ಲಿ ಇದ್ದವರು ಜವಾಬ್ದಾರಿಯುತವಾಗಿ ಇರಬೇಕು'' ಎಂದು ತಿಳಿಸಿದರು.
ಮಹಿಳೆಯರ ಮೇಲೆ ದರ್ಪ ತೋರುವುದು ಸಂಸ್ಕೃತಿಯೇ?: ''ಇವರಲ್ಲಿ ಇರುವ ಹುಳುಕು ನಾವು ತಯಾರು ಮಾಡಿದ್ದಾ?. ಕಲಬುರಗಿಯಲ್ಲಿ ಎಂಥವರಿಗೆ ಟಿಕೆಟ್ ಕೊಟ್ಟಿದ್ದಾರೆ. ವಿಪಕ್ಷ ನಾಯಕ ಅಶೋಕ್ ಮಾತಾಡಿದ್ದು ಸಂಸ್ಕೃತಿಯೇ?. ಸಿ.ಟಿ.ರವಿ ಹೆಣ್ಣುಮಕ್ಕಳ ಬಗ್ಗೆ ಅವಾಚ್ಯವಾಗಿ ನಿಂದನೆ ಮಾಡುತ್ತಾರೆ. ಮುನಿರತ್ನ ಜಾತಿ ನಿಂದನೆ ಮಾಡುತ್ತಾರೆ. ಇದೇನಾ ನಿಮ್ಮ ಸಂಸ್ಕೃತಿ?. ಮಹಿಳೆಯರ ಮೇಲೆ, ಅಧಿಕಾರಿಗಳ ಮೇಲೆ ದರ್ಪ ತೋರುವುದು ನಿಮ್ಮ ಸಂಸ್ಕೃತಿಯೇ?. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆಗೆ ಲಗಾಮು ಇರಲಿ'' ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಜಾರಕಿಹೊಳಿ ಮನೆ ಔತಣಕೂಟ ಸಿಎಂ ಸಿದ್ದರಾಮಯ್ಯ ಪ್ರಾಯೋಜಿತ: ಬಿ.ವೈ. ವಿಜಯೇಂದ್ರ ಟೀಕೆ