ಬೆಂಗಳೂರು: ಹೊಸ ವರ್ಷಾಚರಣೆಯ ದಿನ ಕರ್ತವ್ಯನಿರತ ಸಹದ್ಯೋಗಿ ಯುವತಿಗೆ ಮದ್ಯಪಾನ ಮಾಡಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
22 ವರ್ಷದ ನೊಂದ ಯುವತಿ ನೀಡಿರುವ ದೂರಿನ ಅನ್ವಯ ಆಕೆ ಕೆಲಸ ಮಾಡುತ್ತಿದ್ದ ಕಂಪನಿಯ ಮ್ಯಾನೇಜರ್ ಹೇಮಂತ್, ಸಹದ್ಯೋಗಿಗಳಾದ ಪುನೀತ್ ಹಾಗೂ ಅಜಿತ್ ಎಂಬಾತನ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರುದಾರ ಯುವತಿ ಡಿಸೆಂಬರ್ 31ರಂದು ತನ್ನ ಕಂಪನಿಯ ಪರವಾಗಿ ಬ್ರಿಗೇಡ್ ರಸ್ತೆಯ ಪಬ್‌ವೊಂದರಲ್ಲಿ ಸಿಗರೇಟ್ ಪ್ರೊಮೋಷನ್ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಜೊತೆಗಿದ್ದ ಕಂಪನಿಯ ಮ್ಯಾನೇಜರ್ ಹೇಮಂತ್ ಯುವತಿಯ ಬಳಿ "ತನ್ನನ್ನು ಏಕಾಂಗಿಯಾಗಿ ಭೇಟಿಯಾಗುವಂತೆ" ಸೂಚಿಸಿದ್ದ. ಅದರಂತೆ ಮ್ಯಾನೇಜರ್ ಹೇಮಂತ್‌ನನ್ನು ಯುವತಿ ಭೇಟಿಯಾಗಿದ್ದಳು. ಈ ಸಂದರ್ಭದಲ್ಲಿ ಮದ್ಯಪಾನ ಮಾಡುವಂತೆ ಆರೋಪಿ ಒತ್ತಾಯಿಸಿದ್ದ. 'ಕೆಲಸದ ಸಮಯದಲ್ಲಿ ಮದ್ಯಪಾನ ಮಾಡುವುದಿಲ್ಲ' ಎಂದು ಯುವತಿ ಹೇಳಿದಾಗ, 'ನಾನು ಮ್ಯಾನೇಜರ್, ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ' ಎಂದು ಯುವತಿಗೆ ಮದ್ಯಪಾನ ಮಾಡಿಸಿದ್ದ. ಪಾನಮತ್ತಳಾಗಿದ್ದ ತನ್ನನ್ನು ಆರೋಪಿ ಹೇಮಂತ್ ಅಸಭ್ಯವಾಗಿ ಸ್ಪರ್ಶಿಸಲಾರಂಭಿಸಿದ್ದ. ನಂತರ ಹೇಮಂತ್, ಪುನೀತ್ ಹಾಗೂ ಅಜಿತ್ ತನ್ನನ್ನು ಕಾರಿನಲ್ಲಿ ಕರೆದೊಯ್ದು ಸುತ್ತಾಡಿಸಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ" ಎಂದು ಯುವತಿ ದೂರಿದ್ದಾಳೆ.
ನೊಂದ ಯುವತಿ ನೀಡಿರುವ ದೂರಿನ ಅನ್ವಯ ಸದ್ಯ ಅಶೋಕನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಪಬ್‌ನಲ್ಲಿ ಡ್ರಿಂಕ್ ಆಫರ್ ತಿರಸ್ಕರಿಸಿದ ಯುವತಿಯೊಂದಿಗೆ ಅಸಭ್ಯ ವರ್ತನೆ: ಪ್ರಕರಣ ದಾಖಲು