ಬೆಂಗಳೂರು:ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಬೇಟೆ ಮುಂದುವರೆಸಿದ್ದಾರೆ. ಇಂದು ಬೆಳಗ್ಗಿನಿಂದಲೇ ರಾಜ್ಯಾದ್ಯಂತ ಕಾರ್ಯಾಚರಣೆ ಆರಂಭಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಯ ನಿವಾಸಗಳು ಹಾಗು ಅವರಿಗೆ ಸಂಬಂಧಿಸಿದ ಇತರೆ ಸ್ಥಳಗಳ ಮೇಲೆ ದಾಳಿ ನಡೆಯುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು, ಮೈಸೂರು, ಕೊಳ್ಳೇಗಾಲ ಯಾದಗಿರಿ ಸೇರಿದಂತೆ ಒಟ್ಟಾರೆ 54 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳ ವಿವರ:
- ಸಿ.ಟಿ.ಮುದ್ದುಕುಮಾರ್ - ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಇನ್ವೆಸ್ಟ್ ಕರ್ನಾಟಕ ಫೋರಮ್, ಬೆಂಗಳೂರು
- ಬಲವಂತ್ - ಯೋಜನಾ ನಿರ್ದೇಶಕ, ಯಾದಗಿರಿ ಜಿಲ್ಲಾ ಪಂಚಾಯತ್
- ಆರ್.ಸಿದ್ಧಪ್ಪ - ಹಿರಿಯ ಪಶುವೈದ್ಯ, ಪ್ರಾಥಮಿಕ ಪಶುವೈದ್ಯಕೀಯ ಕೇಂದ್ರ, ರಾಮೇಶ್ವರ, ದೊಡ್ಡಬಳ್ಳಾಪುರ ತಾಲೂಕು
- ಕೆ.ನರಸಿಂಹಮೂರ್ತಿ - ಪೌರಾಯುಕ್ತ, ಹೆಬ್ಬಗೋಡಿ ಸಿಎಂಸಿ
- ಬಿ.ವಿ.ರಾಜಾ - ಪ್ರಥಮ ದರ್ಜೆ ಸಹಾಯಕ, ಕೆಐಎಡಿಬಿ (ಭೂಸ್ವಾಧೀನ ಅಧಿಕಾರಿ), ಬೆಂಗಳೂರು
- ರಮೇಶ್ ಕುಮಾರ್ - ಜಂಟಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು
- ಅತ್ತರ್ ಅಲಿ - ಕಾನೂನು ಮಾಪನಶಾಸ್ತ್ರದ ಉಪ ನಿಯಂತ್ರಕ, ಬೆಂಗಳೂರು ವಿಭಾಗ
- ನಾಗೇಶ್.ಬಿ - ಅಧ್ಯಕ್ಷ, ಅಂತರಗಂಗೆ ಗ್ರಾಮ ಪಂಚಾಯತ್, ಭದ್ರಾವತಿ ತಾಲೂಕು
- ಪ್ರಕಾಶ್ - ಉಪ ನಿರ್ದೇಶಕ, ತೋಟಗಾರಿಕಾ ಇಲಾಖೆ, ಶಿವಮೊಗ್ಗ
- ಚೇತನ್ ಕುಮಾರ್.ಎಸ್ - ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ, ಮಂಡ್ಯ ವಿಭಾಗ
- ಮಂಜುನಾಥ್.ಟಿ.ಆರ್ - ಪ್ರಥಮ ದರ್ಜೆ ಸಹಾಯಕ, ಬೆಂಗಳೂರು ಉತ್ತರ ಉಪ ವಿಭಾಗ ಕಚೇರಿ
ಮಂಗಳೂರು ಪಾಲಿಕೆ ಆಯುಕ್ತರ ನಿವಾಸದ ಮೇಲೆ ದಾಳಿ:ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ನಿವಾಸದ ಮೇಲೆ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಲೇಬರ್ ಇನ್ಸ್‌ಪೆಕ್ಟರ್ ಮನೆ ಮೇಲೆ ದಾಳಿ:ಮೈಸೂರಿನ ಶಾರದಾದೇವಿ ನಗರದಲ್ಲಿರುವ ಲೇಬರ್ ಇನ್ಸ್‌ಪೆಕ್ಟರ್ ಚೇತನ್ ಮನೆ ಮೇಲೆ ದಾಳಿ ಮಾಡಿದ್ದು, ದಾಖಲಾತಿ ಪರಿಶೀಲನೆ ನಡೆಯುತ್ತಿದೆ.