ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ಕರೆದು ಕೆಲ ಆರೋಪಗಳನ್ನು ಮಾಡಿದ್ದರು. ಈ ಬೆನ್ನಲ್ಲೇ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್, ತಮ್ಮ ಲೋಕಾಯುಕ್ತ ಎಸ್ಐಟಿ ಅಧಿಕಾರಿಗಳಿಗೆ ಪತ್ರ ಬರೆದು ಮುಕ್ತ ಮತ್ತು ನ್ಯಾಯ ಸಮ್ಮತ ತನಿಖೆ ನಡೆಸೋಣ, ಟೀಕೆಗಳಿಗೆ ಹೆದರುವ ಅವಶ್ಯಕತೆ ಇಲ್ಲ ಎಂದು ನಿರ್ದೇಶನ ನೀಡಿದ್ದಾರೆ. ಆರೋಪಗಳ ಸಂಬಂಧ ಎಸ್ಐಟಿ ಅಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಕುಮಾರಸ್ವಾಮಿ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಹಾಗೂ ದುರುದ್ದೇಶದ್ದಿಂದ ಕೂಡಿದೆ ಎಂದಿದ್ದಾರೆ.
''ಕುಮಾರಸ್ವಾಮಿ ಅವರು ಆರೋಪಗಳ ಮೂಲಕ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ. ಎಸ್ಐಟಿ ತಂಡ ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ ಹಿನ್ನೆಲೆಯಲ್ಲಿ ಈ ರೀತಿ ಆರೋಪಿಸಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ಆರೋಪಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ '' ಎಂದು ಪತ್ರದಲ್ಲಿ ಹೇಳಿದ್ದಾರೆ.
''ಸುಳ್ಳು ಆರೋಪಗಳಿಂದ ಅಧಿಕಾರಿಗಳಿಗೆ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದು, ಆರೋಪಿ ಎಷ್ಟೇ ಪ್ರಬಲವಾಗಿದ್ದರೂ ಆತ ಆರೋಪಿಯೇ, ಹಾಗೂ ಆರೋಪಿಯ ಆರೋಪದಿಂದ ನಾವು ಭಯಬೀಳುವುದಿಲ್ಲ. ಇಂತಹ ಆರೋಪಗಳಿಗೆ ನಾನು ಭಯಪಡುವುದಿಲ್ಲ. ಎಲ್ಲಾ ಆರೋಪಿಗಳನ್ನು ಮತ್ತು ಅಪರಾಧಿಗಳ ನ್ಯಾಯಾಲಯಕ್ಕೆ ತರೋಣ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬರ್ನಾರ್ಡ್ ಶಾ ಮಾತು ಉಲ್ಲೇಖ:ಅಲ್ಲದೆ ಪತ್ರದಲ್ಲಿ, ಜಾರ್ಜ್ ಬರ್ನಾರ್ಡ್ ಶಾ ಮಾತು ಉಲ್ಲೇಖಿಸಿರುವ ಚಂದ್ರಶೇಖರ್, ''ಹಂದಿಗಳೊಂದಿಗೆ ಎಂದಿಗೂ ಕುಸ್ತಿಯಾಡಬೇಡಿ. ಆದ್ದರಿಂದ ನೀವು ಕೊಳಕಾಗುತ್ತೀರಿ. ಹಂದಿಯೂ ಕೂಡ ಅದನ್ನೇ ಇಷ್ಟಪಡುತ್ತೆ. ಅದೇ ರೀತಿ ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಇದ್ದರಿಂದ ಭಯಬೀಳುವ ಅಗತ್ಯವಿಲ್ಲ'' ಎಂದು ಎಸ್ಐಟಿ ತಂಡಕ್ಕೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.