ಬೆಂಗಳೂರು: ರಾಜ್ಯದಲ್ಲಿ ಉಪಲೋಕಾಯುಕ್ತ -2 ಹುದ್ದೆಯ ನೇಮಕಕ್ಕೆ ಸಂಬಂಧಿಸಿದ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಎರಡನೇ ಉಪ ಲೋಕಾಯುಕ್ತ ಹುದ್ದೆಯು ಕಳೆದ ಎರಡು ವರ್ಷಗಳಿಂದ ಖಾಲಿಯಿದೆ. ವಿರೋಧ ಪಕ್ಷದ ನಾಯಕರ ನೇಮಕವಾಗಿಲ್ಲ ಎಂದು ಸರ್ಕಾರ ವಿಳಂಬ ಮಾಡಿತ್ತು. ಈಗ ಉಪಲೋಕಾಯುಕ್ತರ ನೇಮಕಾತಿಗೆ ಶಿಫಾರಸು ಮಾಡಲಾಗಿದೆ ಎನ್ನಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.
ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು ಉಪಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಇನ್ನೊಂದು ಅರ್ಜಿ ಸಲ್ಲಿಕೆಯಾಗಿದೆ. ಎರಡನ್ನೂ ಒಟ್ಟಿಗೆ ಸೇರಿಸಿ ವಿಚಾರಣೆಗೆ ಪರಿಗಣಿಸಬೇಕು ಎಂದರು. ಅಂತಿಮವಾಗಿ ಪೀಠವು ಪ್ರಕರಣದ ವಿಚಾರಣೆಯನ್ನು ಜೂನ್ 25ಕ್ಕೆ ಮುಂದೂಡಿತು.