ತುಮಕೂರು:ಕೇಂದ್ರದ ವರಿಷ್ಠರು ಯಾವ ರೀತಿ ಒಪ್ಪಿಗೆ ಸೂಚಿಸುವರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಮಾಜಿ ಸಚಿವ ವಿ ಸೋಮಣ್ಣ ಅವರು ಹಿರಿಯರಿದ್ದಾರೆ. ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಇದಕ್ಕೆ ಯಾರ ಅಭ್ಯಂತರವೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಹಾಗೂ ಹಿರಿಯರು ಕುಳಿತು ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬರಲಿದ್ದಾರೆ. ರಾಜ್ಯದ ಯಾವ ಲೋಕಸಭಾ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಆಗಬೇಕೆಂಬ ನಿರ್ಧಾರವನ್ನು ಕೇಂದ್ರದ ವರಿಷ್ಠರು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ನಿರ್ಧಾರ ಮಾಡಲಿದ್ದಾರೆ ಎಂದರು.
ಜೆಡಿಎಸ್ ಬಿಜೆಪಿ ಮೈತ್ರಿ, ಶೀಘ್ರದಲ್ಲಿ ನಿರ್ಧಾರ :ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮೈತ್ರಿ ಹಿನ್ನೆಲೆ ಟಿಕೆಟ್ ಹಂಚಿಕೆ ಕುರಿತಂತೆ ಸದ್ಯದಲ್ಲಿಯೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಅನೇಕ ಮಹಿಳಾಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳು ಪ್ರತಿಯೊಬ್ಬ ಮಹಿಳೆಯರಿಗೆ ತಲುಪಬೇಕು ಎಂಬ ಉದ್ದೇಶದಿಂದ ಬಿಜೆಪಿ ಪಕ್ಷದಿಂದ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನದ ಒಂದು ಭಾಗವಾಗಿ ತುಮಕೂರಿನಲ್ಲಿ ನಡೆಯುವ ಈ ಅಭಿಯಾನ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧಡೆಯಿಂದ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಸೋಮಣ್ಣ ಮಿಂಚಿನ ಸಂಚಾರ :ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ವಿ.ಸೋಮಣ್ಣ ಅವರು ಕ್ಷೇತ್ರಾದ್ಯಂತ ಸಂಚಾರ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದೆರಡು ತಿಂಗಳಿನಿಂದ ಜಿಲ್ಲೆ ಹಾಗೂ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಚುನಾವಣೆಯ ಅಖಾಡವನ್ನು ಅವರು ಸಜ್ಜುಗೊಳಿಸುತ್ತಿದ್ದಾರೆ.