ಬೆಂಗಳೂರು:ಜೋಡಿ ಕೊಲೆಯೊಂದರ ಪ್ರಕರಣದಲ್ಲಿ ಮೂರು ಮಂದಿ ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ಶಿಕ್ಷೆಯನ್ನು ರದ್ದು ಪಡಿಸುವಂತೆ ಕೋರಿ ಅಪರಾಧಿಗಳು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.
ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆ ಪ್ರಶ್ನಿಸಿ ಅಪರಾಧಿಗಳಾದ ಬಾಬು, ಮತ್ತವರ ಸಹೋದರ ನಾಗಪ್ಪ, ಸಂಬಂಧಿ ಮುತ್ತಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮರಣ ದಂಡನೆ ಶಿಕ್ಷೆ ದೃಢೀಕರಿಸಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಘಟನೆ ಸಂಬಂಧ ತಕ್ಷಣ ಪ್ರಚೋದನೆಗೊಳಗಾಗಿ ಕೊಲೆ ಮಾಡಲಾಗಿದೆ ಎಂಬುದಾಗಿ ಅರ್ಜಿದಾರರ ವಾದವನ್ನು ತಿರಿಸ್ಕರಿಸಿದ ನ್ಯಾಯಪೀಠ, ಘಟನೆ ನಡೆಯುವ ಒಂದೆರಡು ದಿನದಲ್ಲಿ ಮೃತರ ನಡುವಿನ ಸಬಂಧ ಬೆಳೆದಿದ್ದರೆ ಅದು ಪ್ರಚೋದನೆಗೊಳಗಾಗಿರಬೇಕು ಎಂದು ಹೇಳಬಹುದಾಗಿದೆ. ಆದರೆ, ಮೃತರ ನಡುವಿನ ಅಕ್ರಮ ಸಂಬಂಧ ಕೊಲೆಗಾರರಿಗೆ ತಿಳಿದಿತ್ತು. ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಕಷ್ಟು ಅವಕಾಶವಿತ್ತು. ಆದರೆ, ಆರೋಪಿಗಳು ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾರೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಪ್ರಕರಣ ಸಾಕ್ಷ್ಯಾಧಾರಗಳು ಇದೊಂದು ಪೂರ್ವಯೋಜಿತ ಕ್ರಮವಾಗಿದೆ ಎಂಬ ಅಂಶ ಬಹಿರಂಗ ಪಡಿಸುತ್ತಿದೆ. ಪ್ರಕರಣದ ಎಲ್ಲ ಆರೋಪಿಗಳು ಘಟನೆ ನಡೆದ ಸಂದರ್ಭದಲ್ಲಿ ಸಾವಿಗೀಡಾದ ಬಸವರಾಜು ಮತ್ತು ಅವರೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಸಂಗೀತಾರನ್ನೇ ಮನೆಯಿಂದ ಹೊರಕ್ಕೆ ಎಳೆದು ತಂದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಬಾಬು ಎಂಬುವರು ಮನೆಯಿಂದ ಕುಡುಗೋಲು ತಂದಿದ್ದಾರೆ. ಈ ಬೆಳವಣಿಗೆಗಳು ಪೂರ್ವಯೋಜಿತ ಎಂಬುದನ್ನು ತಿಳಿಸುತ್ತವೇ ವಿನಾ ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಪೀಠ ವಿವರಿಸಿದೆ.