ಹಾವೇರಿ: ರಾಜ್ಯದಲ್ಲಿ 2023 ರಲ್ಲಿ ಕಾಣಿಸಿಕೊಂಡ ಬರಗಾಲ ಅಪಾರ ಹಾನಿ ಉಂಟುಮಾಡಿದೆ. ರಾಜ್ಯದಲ್ಲಿ ಬರಗಾಲದಿಂದ ಅನ್ನದಾತ ತತ್ತರಿಸಿ ಹೋಗಿದ್ದಾನೆ. ಅದರಲ್ಲೂ ಎರಡುಬಾರಿ ಮೂರು ಬಾರಿ ಬಿತ್ತನೆ ಮಾಡಿದ ರೈತನಿಗೆ ಮಳೆರಾಯನ ಮುನಿಸು ಇನ್ನಷ್ಟು ಸಂಕಷ್ಟ ತಂದಿತ್ತು. ಆ ಸಂದರ್ಭ ರಾಜ್ಯ ಸರ್ಕಾರ ರಾಜ್ಯದಲ್ಲಿನ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿತು. ಅದರಂತೆ ಬರಪೀಡಿತ ತಾಲೂಕುಗಳಿಗೆ ಬರಪರಿಹಾರ ನೀಡುವಲ್ಲಿ ಕೇಂದ್ರದ ಮೇಲೆ ರಾಜ್ಯ ಸರ್ಕಾರ ರಾಜ್ಯದ ಮೇಲೆ ಕೇಂದ್ರ ಸರ್ಕಾರ ಪರಸ್ಪರ ಆರೋಪಗಳು ಮಾಡುತ್ತಿವೆ.
ಕೊನೆಗೂ ರಾಜ್ಯ ಸರ್ಕಾರ ಪ್ರತಿ ರೈತನಿಗೆ ಎರಡು ಸಾವಿರ ರೂಪಾಯಿ ಮಧ್ಯಂತರ ಪರಿಹಾರ ಘೋಷಣೆ ಮಾಡಿ ರೈತರ ಖಾತೆಗಳಿಗೆ ಹಣ ಹಾಕಿತು. ಆದರೆ ಇದು ರಾವಣನ ಹೊಟ್ಟಿಗೆ ಅರೇಕಾಸಿನ ಮಜ್ಜಿಗೆಯಂತೆ ರೈತರಿಗೆ ಸಾಕಾಗಲಿಲ್ಲಾ. 'ಸರ್ಕಾರ ತಾನು ಘೋಷಣೆ ಮಾಡಿದ ಗ್ಯಾರಂಟಿಗಳಿಗೆ ಹಣ ಹೊಂದಿಸುತ್ತಿದೆ. ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲಾ' ಎಂದು ರೈತರು ಪ್ರತಿಭಟನೆಯ ಹಾದಿ ಹಿಡಿದರು. ಸರ್ಕಾರ ರೈತರಿಗೆ ಸಮರ್ಪಕ ಬರಪರಿಹಾರ ನೀಡುವುದಿರಲಿ ತಾನೇ ಘೋಷಣೆ ಮಾಡಿದಂತೆ ರೈತರ ಹಾಲಿಗೆ ಪ್ರೋತ್ಸಾಹ ಧನ ನೀಡುವುದನ್ನು ನಿಲ್ಲಿಸಿದೆ ಎಂದು ರೈತರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಹಾಲು ಉತ್ಪಾದನೆ ಮಾಡುವ ರೈತರಿಗೆ ಪ್ರತಿ ಲೀಟರ್‌ಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಕಳೆದ ಸೆಪ್ಟಂಬರ್ ತಿಂಗಳಿಂದ ಜನಸಾಮಾನ್ಯ ರೈತರಿಗೆ ಪ್ರೋತ್ಸಾಹಧನ ಬಂದಾಗಿದೆ. ಎಸ್ಸಿಎಸ್ಟಿ ರೈತರಿಗೆ ಡಿಸೆಂಬರ್ ತಿಂಗಳಿಂದ ಪ್ರೋತ್ಸಾಹಧನ ಬಂದಾಗಿದೆ. ಹಾವೇರಿ ಜಿಲ್ಲೆಯೊಂದರಲ್ಲಿ ಸುಮಾರು 13 ಕೋಟಿ 89 ಲಕ್ಷ ರೂಪಾಯಿ ಹಣ ಪ್ರೋತ್ಸಾಹಧನ ಸಿಗಬೇಕಿದೆ. ಆದರೆ ಕಳೆದ ಏಳು ತಿಂಗಳಿಂದ ರೈತರ ಹಾಕುವ ಹಾಲಿಗೆ ಪ್ರೋತ್ಸಾಹಧನ ಸಿಗುತ್ತಿಲ್ಲಾ.