ಕೊಪ್ಪಳ: ಸಮಾಜದಲ್ಲಿ ಶಾಂತಿ ಕದಡುವವರಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮಾರ್ಯಾದೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸರಿ ಇಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ನಗರದ ಗವಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೈ ಶ್ರೀರಾಮ್ ಎಂದವರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಸಮಾಜಘಾತುಕ ಕೃತ್ಯಗಳು ನಡೆದಾಗ ಏನೂ ಆಗಿಲ್ಲ ಎಂಬಂತೆ ಸರಕಾರ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಪ್ರತ್ರಿಕ್ರಿಯಿಸಿ, ಪ್ರಜ್ವಲ್ ಆದಷ್ಟು ಬೇಗ ಎಸ್ಐಟಿ ಮುಂದೆ ಹಾಜರಾಗಬೇಕು. ಇಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅಶ್ಲೀಲ ವಿಡಿಯೋ ಪ್ರಕರಣ ಎಷ್ಟು ಹೇಯಕೃತ್ಯವೋ, ವಿಡಿಯೋ ಹಂಚಿದ್ದು ಕೂಡಾ ಅಷ್ಟೇ ಹೇಯ ಕೃತ್ಯ. ಎಸ್ಐಟಿ ಎರಡನ್ನೂ ಗಂಭೀರವಾಗಿ ತೆಗೆದುಕೊಂಡ ತನಿಖೆ ಮಾಡಬೇಕು ಎಂದು ಪ್ರಜ್ವಲ್ ಬಂಧನಕ್ಕೂ ಮುನ್ನ ಒತ್ತಾಯಿಸಿದರು.
ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ: ಈ ಹಿಂದೆ ಬಿಜೆಪಿ ನೇತೃತ್ವದ ಸರಕಾರದಲ್ಲಿ ಶಿಕ್ಷಕರ ನೇಮಕಾತಿ ನಡೆದಿತ್ತು. ಸದ್ಯ 14 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳುವ ಅವಶ್ಯಕತೆ ಇದೆ. ಕಲ್ಯಾಣ ಕರ್ನಾಟಕದಲ್ಲಿಯೇ 5,000 ಶಿಕ್ಷಕರ ನೇಮಕವಾಗಬೇಕಿದೆ. ಸರಕಾರ 5,000 ಕೋಟಿ ರೂಪಾಯಿ ಶಿಕ್ಷಣಕ್ಕಾಗಿ ತೆಗೆದಿರಿಸಿದೆ. ಆದರೆ, ಈ ಸರಕಾರ ಯಾವುದೇ ಪ್ರಕ್ರಿಯೆ ಕೈಗೊಳ್ಳುತ್ತಿಲ್ಲ ಎಂದು ದೂರಿದರು.