ಬೆಂಗಳೂರು:ಆಗಸ್ಟ್ 8ರಿಂದ ಆಗಸ್ಟ್ 19ರ ವರೆಗೆ ಆಯೋಜಿಸಲಾಗಿದ್ದ ಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬಿದ್ದಿದೆ. ಈ ವೇಳೆ 9 ಲಕ್ಷ ಜನ ವೀಕ್ಷಕರಿಂದ 3 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ.
78ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಆಯೋಜಿಸಲಾಗಿದ್ದ 216ನೇ ಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಬರೋಬ್ಬರಿ 9 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. ದೇಶ ವಿದೇಶಗಳಿಂದ ಆಗಮಿಸಿ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಕೊನೆಯ ದಿನವೂ ಭಾರೀ ಪ್ರಮಾಣದಲ್ಲಿ ಜನರು ಆಗಮಿಸಿದ್ದು, ಸೋಮವಾರ 65 ಸಾವಿರ ಜನರು ಭೇಟಿ ನೀಡಿದ್ದರು.
ಸಾರ್ವಜನಿಕರ ಭೇಟಿಯಿಂದ 3 ಕೋಟಿಗೂ ಅಧಿಕ ಆದಾಯ ಬಂದಿದ್ದರೆ, ಸ್ಟಾಲ್ ಮತ್ತಿತರ ಮೂಲಗಳಿಂದ 40 ಲಕ್ಷದಷ್ಟು ಆದಾಯ ಸಂಗ್ರಹವಾಗಿದೆ. ಕಳೆದ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಕೆಂಗಲ್ ಹನುಮಂತಯ್ಯನವರ 4 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಬೃಹತ್ ಹೂವಿನ ಪುತ್ಥಳಿ, ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ವಿಧಾನಸೌಧ ಮತ್ತು ಶಿವಪುರ ಸತ್ಯಾಗ್ರಹ ಸೌಧವನ್ನು ನಿರ್ಮಿಸಲಾಗಿತ್ತು. 8.26 ಲಕ್ಷ ಜನರಿಂದ 4 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ ಈ ಬಾರಿ 3.49 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಮೂಲಕ ಕಳೆದ ಬಾರಿಗಿಂತ ಈ ಸಲ ಕಡಿಮೆ ಮೊತ್ತ ಸಂಗ್ರಹವಾದಂತಾಗಿದೆ.
"ಈ ಬಾರಿ ಆಯೋಜನೆಯ ಸಮಯದಲ್ಲಿ ಮಳೆ ಬೀಳುತ್ತಿತ್ತು. ಆದರೂ ಜನರು ಉತ್ಸಾಹದಿಂದ ಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು. ಅಂಬೇಡ್ಕರ್ ಅವರ ಜೀವನಾಧಾರಿತವಾಗಿ ಈ ಬಾರಿಯ ಪುಷ್ಪ ಪ್ರದರ್ಶನಕ್ಕೆ ಜನರು ಭಾಗವಹಿಸಿರುವುದು ಸಂತೋಷದ ವಿಷಯವಾಗಿದೆ. ನಮಗೆ ಪ್ರಮುಖವಾಗಿ ಹಣಕ್ಕಿಂತಲೂ ಮಕ್ಕಳು ಮತ್ತು ಜನರು ಭೇಟಿ ನೀಡಿ ಪ್ರದರ್ಶನವನ್ನು ಆನಂದಿಸುವುದು ಮುಖ್ಯವಾಗಿದೆ" ಎಂದು ಲಾಲ್ ಬಾಗ್ ಸಹ ನಿರ್ದೇಶಕಿ ಕುಸುಮಾ ಹೇಳಿದ್ದಾರೆ.
"ಐತಿಹಾಸಿಕ ಲಾಲ್ ಬಾಗ್ ಗಾಜಿನ ಮನೆಯಲ್ಲಿ ಆಗಸ್ಟ್ 8 ರಿಂದ 19ರ ವರೆಗೆ ಜರುಗಿದ ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ, ಡಾಕ್ಟರ್ ಬಿ. ಆರ್. ಅಂಬೇಡ್ಕರ್ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 216ನೇ ಫಲ ಪುಷ್ಪ ಪ್ರದರ್ಶನಕ್ಕೆ ಒಟ್ಟಾರೆ 9 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ" ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್ ತಿಳಿಸಿದ್ದಾರೆ.