ರಾಮನಗರ:ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಇಂದು ಲಕ್ಷದೀಪೋತ್ಸವ ಅದ್ದೂರಿಯಾಗಿ ನಡೆಯಿತು.
ಕ್ಷೇತ್ರದ ಪವಾಡ ಬಸಪ್ಪನವರ ಹುಟ್ಟುಹಬ್ಬ ಹಾಗೂ ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ನಡೆದ ಲಕ್ಷದೀಪೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಭಾನುವಾರ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಚಾಮುಂಡೇಶ್ವರಿ ತಾಯಿಗೆ ಅಭಿಷೇಕ, ವಿಶೇಷ ಅಲಂಕಾರ, ಮೆರವಣಿಗೆ, ಪವಾಡ ಬಸವಪ್ಪನ ಗದ್ದುಗೆಗೆ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಮಧ್ಯಾಹ್ನ ಕ್ಷೇತ್ರದ ಪವಾಡ ಬಸವಪ್ಪನವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಭಕ್ತರು ಬಸವಪ್ಪನ ಮುಂಭಾಗ ಕೇಕ್ ಕತ್ತರಿಸಿ ಸಂಭ್ರಮಿಸಿದರು. ತದನಂತರ, ಬಸವಪ್ಪನಿಗೆ ಹೂವಿನ ಅಭಿಷೇಕ ಮಾಡಿ ಶುಭಾಶಯ ಕೋರಿದರು.