ಬೆಂಗಳೂರು:ಉಚಿತ ಗ್ಯಾರಂಟಿ, ತಾಪಮಾನ ಏರಿಕೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಬಳಕೆಯ ಪ್ರಮಾಣದ ವಿಪರೀತ ಹೆಚ್ಚಾಗುತ್ತಿದೆ. ಜನರ ಬೇಡಿಕೆ ನೀಗಿಸಲು ಇಂಧನ ಇಲಾಖೆ ಪಡಿಪಾಟಲು ಪಡುವಂತಾಗಿದೆ. ಮಳೆ, ಸಂಪನ್ಮೂಲಗಳ ಕೊರತೆಯಿಂದ ಉತ್ಪಾದನೆಯೂ ಕುಗ್ಗಿದೆ. ಇದರಿಂದ ರಾಜ್ಯ ಸರ್ಕಾರ ಮತ್ತೆ ಭಾರೀ ಪ್ರಮಾಣದಲ್ಲಿ ವಿದ್ಯುತ್ ಖರೀದಿಗೆ ಮುಂದಾಗಿದೆ.
ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದೆ. ಮುಂಗಾರು ಪೂರ್ವ ಮಳೆಯೂ ಕೈ ಕೊಟ್ಟಿದೆ. ತಾಪಮಾನ ವಿಪರೀತ ಹೆಚ್ಚುತ್ತಿದೆ. ಮಳೆ ಬೀಳದ ಕಾರಣ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳ ಒಡಲು ಬರಿದಾಗುತ್ತಿದೆ. ಇದರಿಂದ ರಾಜ್ಯದ ಪ್ರಮುಖ ಮೂರು ಜಲ ವಿದ್ಯುತ್ ಘಟಕಗಳಲ್ಲೂ ವಿದ್ಯುತ್ ಉತ್ಪಾದನೆ ಭಾಗಶಃ ಸ್ಥಗಿತವಾಗಿದೆ.
ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ ಹೆಚ್ಚಿನ ಉತ್ಪಾದನೆ ಮಾಡುತ್ತಿದೆಯಾದರೂ, ಈಗಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಎಸ್ಕಾಂಗಳು ವಿದ್ಯುತ್ ಬೇಡಿಕೆ ಈಡೇರಿಸಲು ಅಪಾರ ಪ್ರಮಾಣದಲ್ಲಿ ವಿದ್ಯುತ್ ಖರೀದಿ ಮಾಡುತ್ತಿವೆ.
ಗರಿಷ್ಠ ಮಟ್ಟ ತಲುಪಿದ ವಿದ್ಯುತ್ ಬಳಕೆ:ರಾಜ್ಯದಲ್ಲಿ ಸರಾಸರಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗೂ ಅಧಿಕವಿದೆ. ಇದರ ಪರಿಣಾಮವಾಗಿ ವಿದ್ಯುತ್ ಬಳಕೆ ತೀವ್ರವಾಗಿದೆ. ಇಂಧನ ಇಲಾಖೆ ನೀಡಿರುವ ಮಾಹಿತಿಯಂತೆ, ಏಪ್ರಿಲ್ ಅಂತ್ಯಕ್ಕೆ ರಾಜ್ಯದ ವಿದ್ಯುತ್ ಬಳಕೆ 330.50 ಮೆಗಾ ವ್ಯಾಟ್ಗೆ ತಲುಪಿದೆ. ಕಳೆದ ವರ್ಷ ಏಪ್ರಿಲ್ 30ಕ್ಕೆ ರಾಜ್ಯದ ವಿದ್ಯುತ್ ಬಳಕೆ 230 ಮೆಗಾ ವ್ಯಾಟ್ ಇತ್ತು. ಅಂದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಏಪ್ರಿಲ್ ಅಂತ್ಯಕ್ಕೆ ರಾಜ್ಯದ ಒಟ್ಟು ವಿದ್ಯುತ್ ಬಳಕೆ 100 ಮೆಗಾವ್ಯಾಟ್ನಷ್ಟು ಹೆಚ್ಚಳವಾಗಿದೆ. ರಾಜ್ಯದ ಗರಿಷ್ಠ ವಿದ್ಯುತ್ ಬೇಡಿಕೆ 16,693 ಮೆಗಾ ವ್ಯಾಟ್ಗೆ ತಲುಪಿದೆ.
ಉತ್ಪಾದನೆ ಸ್ಥಿತಿಗತಿ ಹೇಗಿದೆ?:ಇಂಧನ ಇಲಾಖೆ ಮಾಹಿತಿಯಂತೆ, ರಾಜ್ಯದ ಪ್ರಮುಖ ಮೂರು ಜಲ ವಿದ್ಯುತ್ ಘಟಕಗಳಿಂದ ಪ್ರಸಕ್ತ ವರ್ಷ 1,638 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕಳೆದ ವರ್ಷ ಇದು 2,212 ಮೆಗಾವ್ಯಾಟ್ ಇತ್ತು. ಅಂದರೆ ಈ ವರ್ಷ ಸುಮಾರು 574 ಮೆಗಾವ್ಯಾಟ್ ಕೊರತೆ ಉಂಟಾಗಿದೆ. ಮೂರು ಜಲ ವಿದ್ಯುತ್ ಘಟಕಗಳಿಂದ ಈ ವರ್ಷದ ನಾಲ್ಕು ತಿಂಗಳಲ್ಲಿ (ಏಪ್ರಿಲ್ 30ಕ್ಕೆ) 18.97 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗಿದೆ.