ಕರ್ನಾಟಕ

karnataka

ETV Bharat / state

ಕೋರ್ಟ್​​ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು: ರೈತನಿಗೆ ಪರಿಹಾರ ನೀಡದ್ದಕ್ಕೆ ಎಸಿ ಕಚೇರಿ ಸಾಮಗ್ರಿ ಜಪ್ತಿ!

ಎಸಿ ಕಚೇರಿಯಲ್ಲಿದ್ದ ಪಿಠೋಪಕರಣಗಳು, 5 ಕಂಪ್ಯೂಟರ್‌, 2 ಝೆರಾಕ್ಸ್ ಯಂತ್ರ, 3 ಪ್ರಿಂಟರ್‌, 3 ಕಪಾಟ್‌ ಸೇರಿದಂತೆ ಸುಮಾರು 3.54 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ನ್ಯಾಯಾಲಯದ ಸಿಬ್ಬಂದಿ ಇಂದು ಜಪ್ತಿ ಮಾಡಿದರು.

Kumta AC office equipment confiscated by court for not giving compensation to the farmer
ರೈತನಿಗೆ ಪರಿಹಾರ ನೀಡದಕ್ಕೆ ಎಸಿ ಕಚೇರಿ ಸಾಮಗ್ರಿ ಜಪ್ತಿ (ETV Bharat)

By ETV Bharat Karnataka Team

Published : Nov 7, 2024, 4:57 PM IST

Updated : Nov 7, 2024, 6:39 PM IST

ಕಾರವಾರ: ಸೂಕ್ತ ಪರಿಹಾರ ನೀಡದಿದ್ದಾಗ ಸಂಬಂಧಪಟ್ಟ ಇಲಾಖೆಗೆ ನ್ಯಾಯಾಲಯ ದಂಡ ಹಾಕುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ ರೈತನಿಂದ ಪಡೆದ ಜಾಗಕ್ಕೆ ಪರಿಹಾರ ನೀಡದೇ ಸತಾಯಿಸುತ್ತಿದ್ದ ಇಲಾಖೆಯ ಸಾಮಗ್ರಿಗಳನ್ನೇ ಜಪ್ತಿ ಮಾಡಲು ನ್ಯಾಯಾಲಯ ಆದೇಶ ನೀಡಿದ್ದು, ಅದರಂತೆ ಅಧಿಕಾರಿಗಳು ಇಲಾಖೆಯ ವಸ್ತುಗಳನ್ನೇ ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಹೌದು, ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಹಾಯಕ ಆಯುಕ್ತರ ಕಚೇರಿಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಸಣ್ಣ ನೀರಾವರಿ ಇಲಾಖೆಯು ಕುಡಿಯುವ ನೀರಿನ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಂಡ ರೈತನಿಗೆ ಪರಿಹಾರ ನೀಡದೇ ಸತಾಯಿಸುತ್ತಿತ್ತು. ಈ ಹಿನ್ನೆಲೆ ಕುಮಟಾದ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಲಯದ ಸಿಬ್ಬಂದಿ ಸಹಾಯಕ ಆಯುಕ್ತರ ಕಚೇರಿಯನ್ನೇ ಜಪ್ತಿ ಪಡಿಸಿದ್ದಾರೆ.

ಕೋರ್ಟ್​​ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು: ರೈತನಿಗೆ ಪರಿಹಾರ ನೀಡದ್ದಕ್ಕೆ ಎಸಿ ಕಚೇರಿ ಸಾಮಗ್ರಿ ಜಪ್ತಿ! (ETV Bharat)

ಜಿಲ್ಲೆಯ ಅಂಕೋಲಾ ತಾಲೂಕಿನ ಗುಂಡಬಾಳ ನಿವಾಸಿ ಉದಯ ಬಾಳಗಿ ಎಂಬುವವರು ಸಣ್ಣ ನೀರಾವರಿ ಇಲಾಖೆಯ ಕುಡಿಯುವ ನೀರಿನ ಯೋಜನೆಗಾಗಿ 4 ಗುಂಟೆ ಜಾಗವನ್ನು ನೀಡಿದ್ದರು. ಭೂ ಸ್ವಾಧೀನ ಪ್ರಕ್ರಿಯೆ ನಡೆಸಿದ ಕುಮಟಾ ಉಪ ವಿಭಾಗಾಧಿಕಾರಿ ಅವರು ಯೋಗ್ಯ ಪರಿಹಾರ ಕೊಟ್ಟಿರಲಿಲ್ಲ. ನ್ಯಾಯಾಲಯವು 2019ರಲ್ಲಿಯೇ ಹೆಚ್ಚುವರಿ ಪರಿಹಾರವಾಗಿ 9 ಲಕ್ಷ ರೂ. ನೀಡುವಂತೆ ಆದೇಶಿಸಿತ್ತು. ಆದರೆ, ಈತನಕ ಯಾವುದೇ ಪರಿಹಾರ ನೀಡಿರಲಿಲ್ಲ. ಕುಮಟಾ ಜೆಎಂಎಫ್‌ಸಿ ನ್ಯಾಯಾಲಯ ಈ ಹಿಂದೆಯೇ ಪರಿಹಾರವನ್ನು ಸಂತ್ರಸ್ತರಿಗೆ ನೀಡುವಂತೆ ಸೂಚನೆ ಕೂಡ ನೀಡಿತ್ತು. ಈ ಬಗ್ಗೆ ಉಪ ವಿಭಾಗಾಧಿಕಾರಿ ಕಚೇರಿಯವರು ತಲೆ ಕೆಡಿಸಿಕೊಳ್ಳದ ಕಾರಣ ನ್ಯಾಯಾಲಯ ಸಹಾಯಕ ಆಯುಕ್ತರ ಕಚೇರಿಯನ್ನೇ ಜಪ್ತಿ ಪಡಿಸಿಕೊಳ್ಳುವಂತೆ ಆದೇಶಿಸಿದೆ.

ಇನ್ನು, ಕೋರ್ಟ್ ಆದೇಶ ಹಿಡಿದು ಕುಮಟಾ ತಾಲೂಕು ಆಡಳಿತ ಸೌಧದಲ್ಲಿರುವ ಉಪ ವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದ ಜೆಎಂಎಫ್‌ಸಿ ನ್ಯಾಯಾಲಯದ ಸಿಬ್ಬಂದಿ ಕಚೇರಿಯ ಅಧಿಕಾರಿಗಳ ಗಮನಕ್ಕೆ ತಂದು ಎಸಿ ಕಚೇರಿಯನ್ನು ಜಪ್ತಿ ಪಡಿಸಿಕೊಂಡರು. ಭೂಮಿಯ ಪರಿಹಾರದ ಮೊತ್ತಕ್ಕೆ ಬಡ್ಡಿ ಸೇರಿಸಿ 10.58 ಲಕ್ಷ ರೂ. ಆಗಿದ್ದು, ಎಸಿ ಕಚೇರಿಯಲ್ಲಿದ್ದ ಪಿಠೋಪಕರಣಗಳು, 5 ಕಂಪ್ಯೂಟರ್‌ಗಳು, 2 ಝೆರಾಕ್ಸ್ ಯಂತ್ರ, 3 ಪ್ರಿಂಟರ್‌ಗಳು, 3 ಕಪಾಟ್‌ಗಳು ಸೇರಿದಂತೆ ಸುಮಾರು 3.54 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಪಡಿಸಿಕೊಂಡು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋದರು. ಕೋರ್ಟ್ ಸಿಬ್ಬಂದಿ ಎಸಿ ಕಚೇರಿಗೆ ಬರುತ್ತಿದ್ದಂತೆ ಎಸಿ ಕಲ್ಯಾಣಿ ಕಾಂಬ್ಳೆ ಅವರು ತಮ್ಮ ಸರ್ಕಾರಿ ವಾಹನ ಏರಿ ಅಲ್ಲಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇಲ್ಲವಾದರೆ ಸರ್ಕಾರಿ ಕಾರನ್ನು ಕೂಡ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡುವ ಸಾಧ್ಯತೆ ಕೂಡ ಇತ್ತು ಎನ್ನಲಾಗಿದೆ.

ಇದನ್ನೂ ಓದಿ:ನರ್ಸರಿಗಳಿಗೆ ಭೂಸ್ವಾಧೀನ ಪ್ರಕ್ರಿಯೆ: ವಿನಾಯ್ತಿ ನೀಡುವ ಕುರಿತು ಸೂಕ್ತ ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ

Last Updated : Nov 7, 2024, 6:39 PM IST

ABOUT THE AUTHOR

...view details