ಬೆಂಗಳೂರು :ಪ್ರಾಣಿಗಳೊಂದಿಗೆ ಸಾಮರಸ್ಯದ ಸಹಬಾಳ್ವೆಯು ನಮ್ಮ ಸುತ್ತಲಿನ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಪ್ರಾಣಿಗಳ ಜನನ ನಿಯಂತ್ರಣ ಮತ್ತು ವ್ಯಾಕ್ಸಿನೇಷನ್‌ಗಳ ಹೊರತಾಗಿ, ಪ್ರಾಣಿಗಳ ನಡವಳಿಕೆಯನ್ನು ಅರ್ಥಮಾಡಿಕೊಂಡು, ಪ್ರಕೃತಿ ಅವುಗಳನ್ನು ರಚಿಸಿದ ರೀತಿಯಲ್ಲಿ ಅವುಗಳನ್ನು ಒಪ್ಪಿಕೊಳ್ಳುವುದು ಸಹ ಮುಖ್ಯವಾದ ವಿಷಯವಾಗಿದೆ. ಈ ಹಿನ್ನೆಲೆ ನಾಯಿಗಳಿಗಾಗಿ ಅಕ್ಟೋಬರ್ 17 ರಂದು ಬಿಬಿಎಂಪಿ ಕುಕುರ್ ತಿಹಾರ್ ಉತ್ಸವ ಆಚರಿಸಲು ನಿರ್ಧರಿಸಿದೆ.
ಸಹವರ್ತಿನ್ ಅನಿಮಲ್ ವೆಲ್‌ಫೇರ್ ಟ್ರಸ್ಟ್ ಮತ್ತು ಇತರ ಆಸಕ್ತ ಸಂಸ್ಥೆಗಳೊಂದಿಗೆ ಪಾಲಿಕೆಯ ಪಶುಸಂಗೋಪನೆ ವಿಭಾಗ ಪ್ರಾಣಿಗಳಿಗೆ ಮಾನವೀಯ ವಾತಾವರಣವನ್ನು ನಿರ್ಮಿಸುವಲ್ಲಿ ಹಾಗೂ ಮಾನವ-ಪ್ರಾಣಿ ಸಂಘರ್ಷಗಳನ್ನು ಕಡಿಮೆ ಮಾಡಲು ಅನೇಕ ಉಪಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರತಿ ವಾರ್ಡ್ಗಳಲ್ಲಿ ಸಹಬಾಳ್ವೆಯ ಚಾಂಪಿಯನ್ ಗಳನ್ನು ಸಕ್ರಿಯಗೊಳಿಸುವುದು ಈ ಉತ್ಸವದ ಉದ್ದೇಶವಾಗಿದೆ.
ಸಮಾಜದಲ್ಲಿ ಕಡಿತ ಹಾಗೂ ದಾಳಿಯ ಭಯದಿಂದ ನಾಯಿಗಳ ಮೇಲೆ ಕೇವಲ ನಕಾರಾತ್ಮಕ ಭಾವನೆಯು ಹೆಚ್ಚಾಗುತ್ತಿದೆ. ಆದರೆ ನಾಯಿಗಳು ಬಹಳ ನಿಷ್ಠಾವಂತ, ವಿಧೇಯ, ರಕ್ಷಣಾತ್ಮಕ ಹಾಗೂ ಭಾವನಾತ್ಮಕ ಬೆಂಬಲ ನೀಡುವಂತ ಪ್ರಾಣಿಯೂ ಆಗಿದೆ. ಪ್ರಾಣಿಗಳೊಂದಿಗಿನ ಸಂಘರ್ಷ ನಿರ್ವಹಿಸಲು, ರೇಬೀಸ್ ಕಾಯಿಲೆಯನ್ನು ತಡೆಗಟ್ಟುವ ಕ್ರಮಗಳನ್ನು ಪ್ರತಿಪಾದಿಸುತ್ತಿದ್ದರೂ, ಸಮಾಜಕ್ಕೆ ನಾಯಿಗಳ ಸಕಾರಾತ್ಮಕ ಕೊಡುಗೆಗಳನ್ನು ಆಚರಿಸಲು ಮತ್ತು ಎತ್ತಿ ತೋರಿಸಲು ಈ ಉತ್ಸವ ಕಾರಣವಾಗಲಿದೆ.
'ಅಕ್ಟೋಬರ್ 17ರಂದು ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಹಂಚಿಕೊಳ್ಳುತ್ತಾ,
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಹಾಗೂ ಪ್ರಾಣಿಗಳ ಪಾಲಕರನ್ನು ಒಟ್ಟುಗೂಡಿಸುವ ಮೂಲಕ ಪಾಲಿಕೆ ನಾಯಿಗಳಿಗೆಂದು 'ಕುಕುರ್ ತಿಹಾರ್' ಉತ್ಸವ ಆಚರಿಸಲು ನಿರ್ಧರಿಸಿದೆ' ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.