ಶಿವಮೊಗ್ಗ: "ನನಗೆ ಬಿಜೆಪಿಯಿಂದ ಆಹ್ವಾನ ಬಂದಿದೆ. ಆದರೆ ನನ್ನ ನಿಲುವನ್ನು ನಾನಿನ್ನೂ ಸ್ಪಷ್ಟಪಡಿಸಿಲ್ಲ" ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಭವನದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ಬಿಜೆಪಿಯಿಂದ ಆಹ್ವಾನ ಬಂದಿದೆ. ನನ್ನ ಸ್ಪಷ್ಟ ನಿಲುವನ್ನು ನಾನಿನ್ನೂ ಹೇಳಿಲ್ಲ. ಕಾದು ನೋಡಿ ಏನಾಗುತ್ತದೆ. ನನ್ನ ಮಗ ಕಾಂತೇಶ್ ಹಾವೇರಿಯಲ್ಲಿ ಶಾಸಕ ಸ್ಥಾನ ಖಾಲಿ ಇರುವಲ್ಲಿ ಸ್ಪರ್ಧೆ ಮಾಡುವ ವಿಚಾರ ನಮ್ಮ ಮುಂದೆ ಇಲ್ಲ. ಎಲ್ಲಾ ಪ್ರಮುಖರ ಜೊತೆ ಕುಳಿತು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ನಾವೆಲ್ಲ ಬಿಜೆಪಿಯಲ್ಲಿ ಇರುವವರೆ. ಪಕ್ಷ + ಕಾರ್ಯಕರ್ತ= ಹೀರೋ, ಪಕ್ಷ-ಕಾರ್ಯಕರ್ತ= ಜೀರೋ" ಎಂದರು.
ಜಿ ಪ್ಲಸ್ ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಲು 15 ದಿನ ಗಡುವು: "ಆಶ್ರಯ ಮನೆ ಕಟ್ಟುವುದಾಗಿ ಹೇಳಿ 4 ವರ್ಷವಾಯಿತು. ಸಾಮಾನ್ಯ ಜನರಿಂದ 80 ಸಾವಿರ ರೂ.ಗಳನ್ನು ಹಾಗೂ ಎಸ್ಸಿ/ಎಸ್ಟಿ ಅವರಿಂದ 50 ಸಾವಿರ ರೂ. ಪಡೆಯಲಾಗಿತ್ತು. ಗೋವಿಂದಪುರದಲ್ಲಿ ಆಶ್ರಯ ಮನೆ ನಿರ್ಮಾಣಕ್ಕೆ ಕೇವಲ ಗುದ್ದಲಿ ಪೂಜೆ ಮಾಡಲಾಗಿದೆ ಅಷ್ಟೇ. ಕುಡಿಯುವ ನೀರು, ಕಾಂಕ್ರಿಟ್ ರಸ್ತೆ, ಬೀದಿ ದೀಪ, ಚರಂಡಿಗೆ ಹಣ ಮಂಜೂರು ಮಾಡಲಾಗಿತ್ತು. ಲಾಟರಿ ಮೂಲಕ ಮನೆ ಹಂಚಿಕೆ ಮಾಡಲಾಗಿದೆ. ಈ ಸರ್ಕಾರ ಬಂದ ನಂತರ ಜಮೀರ್ ಅಹಮದ್ ಜೊತೆ ವಿಶೇಷ ಸಭೆ ನಡೆಸಲಾಗಿತ್ತು. ಆಗ ಜಮೀರ್ ಶಿವಮೊಗ್ಗಕ್ಕೆ ಬಂದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಅನೇಕ ಕಾರಣಗಳಿಂದ ಅವರು ಬರಲು ಆಗಿಲ್ಲ".