ಮೈಸೂರು:"ಸ್ಥಾನಮಾನ ಬೇಕಿರುವವರು ಮಾಧ್ಯಮಗಳ ಮುಂದೆ ಆಸೆ ವ್ಯಕ್ತಪಡಿಸಿದರೆ ಏನೂ ಪ್ರಯೋಜನ ಇಲ್ಲ. ಈ ಬಗ್ಗೆ ಸಂಬಂಧಿಸಿದ ವ್ಯಕ್ತಿಗಳ ಮುಂದೆ ಹೇಳಿದರೆ ಸಾಕು. ಆದರೂ ಈ ಬಗ್ಗೆ ಎಚ್ಚರಿಕೆ ಕೊಟ್ಟ ಮೇಲೂ ಮಾತನಾಡುತ್ತಿದ್ದಾರೆ. ನಮ್ಮ ವರಿಷ್ಠರಿಗೆ ತಾಳ್ಮೆ ಹೆಚ್ಚು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ" ಎಂದು ಸಚಿವ ರಾಜಣ್ಣ ವಿರುದ್ಧ ಪರೋಕ್ಷವಾಗಿ ಮೈಸೂರಿನಲ್ಲಿ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ವಿಭಾಗೀಯ ಮಟ್ಟದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ಸಭೆ ನಡೆಸಲು ನಗರದ ಪ್ರಾದೇಶಿಕ ಕಚೇರಿಗೆ ಆಗಮಿಸಿದ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದರು.
"ಸಚಿವ ರಾಜಣ್ಣ ಪದೇ ಪದೇ ಮಾಧ್ಯಮಗಳ ಮುಂದೆ ಡಿಸಿಎಂ, ನೇಮಕದ ಬಗ್ಗೆ ಮಾತನಾಡುವುದು ಸರಿಯಲ್ಲ. ಯಾರಿಗಾದರು ಯಾವುದಾದರು ಸ್ಥಾನಮಾನ ಬೇಕಿದ್ದರೆ ಅದನ್ನು ಪಕ್ಷದ ವರಿಷ್ಠರ ಮುಂದೆ ಹೇಳಬೇಕು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ತಮ್ಮ ಆಸೆಯನ್ನು ಹೇಳಿದರೆ ಮಾಧ್ಯಮದವರು ಆ ಸ್ಥಾನ ಕೊಡಿಸಲು ಸಾಧ್ಯವೇ?. ಸ್ಥಾನಮಾನದ ವಿಚಾರವನ್ನು ವರಿಷ್ಠರ ಬಳಿ ಮಾತ್ರ ಚರ್ಚೆ ಮಾಡಬೇಕು. ಮಾಧ್ಯಮದವರ ಮುಂದೆ ಜನರ ಸಮಸ್ಯೆಯನ್ನು ಚರ್ಚೆ ಮಾಡಿದರೆ ಸರ್ಕಾರಕ್ಕೂ ಒಳ್ಳೆಯದು, ಜನರಿಗೂ ಒಳ್ಳೆಯದು. ಆ ವಿಚಾರ ಬಿಟ್ಟು ವೈಯಕ್ತಿಕ ಚರ್ಚೆ ಮಾಡಿದರೆ ಸರ್ಕಾರಕ್ಕೆ ನಷ್ಟ" ಎಂದರು.
ಸ್ವಾಮೀಜಿ ಹೇಳಿಕೆ ಸರಿಯಲ್ಲ:ಸರ್ಕಾರಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ಗೆ ಸಿಎಂ ಸ್ಥಾನ ಬಿಟ್ಟು ಕೊಡಿ ಎಂದು ಸ್ವಾಮೀಜಿ ಹೇಳಿದ್ದು ಸರಿಯಲ್ಲ. ಸ್ವಾಮೀಜಿಗಳು ಯಾವ ವಿಚಾರವನ್ನು ಎಲ್ಲಿ ಮಾತನಾಡಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಸರ್ಕಾರಿ ಸಮಾರಂಭದಲ್ಲಿ ರಾಜಕೀಯ ವಿಚಾರ ಮಾತನಾಡಬಾರದು ಎಂದು ಹೇಳಿದರು.
ಮಳೆ ಹಾನಿಯ ಬಗ್ಗೆ ಚರ್ಚೆ:ರಾಜ್ಯದ 31 ಜಿಲ್ಲೆಗಳ ಪೈಕಿ 24 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದೆ. 7 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಇಲ್ಲಿಯವರೆಗೆ ಮಳೆ ಹಾಗೂ ಇದಕ್ಕೆ ಸಂಬಂದಿಸಿದಂತೆ 20 ಜನ ಮೃತಪಟ್ಟಿದ್ದಾರೆ. ಮಳೆ ಹಾನಿಯಿಂದ ಉಂಟಾಗುವ ನಷ್ಟಕ್ಕೆ ಪರಿಹಾರ ನೀಡಲು ಸದ್ಯಕ್ಕೆ ನಮ್ಮ ಬಳಿ ಹಣ ಇದೆ. ಮುಂದೆ ಮಳೆ ಹೆಚ್ಚಾದರೆ ಕೇಂದ್ರದ ಬಳಿ ಪರಿಹಾರ ಕೇಳುತ್ತೇವೆ" ಎಂದು ತಿಳಿಸಿದರು
ಸರ್ಕಾರಿ ಜಾಗಗಳ ಒತ್ತುವರಿ ಸರ್ವೆ ಜುಲೈನಲ್ಲಿ ಮುಕ್ತಾಯ:ರಾಜ್ಯದಲ್ಲಿ ಸರ್ಕಾರಿ ಜಾಗಗಳನ್ನು ರಕ್ಷಿಸುವ ಸರ್ವೇ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟು 14 ಲಕ್ಷ ಸರ್ಕಾರಿ ಜಾಗಗಳು ಇವೆ. ಇವುಗಳಲ್ಲಿ ಒತ್ತುವರಿ ಎಷ್ಟಾಗಿದೆ ಎಂಬ ಸರ್ವೆ ಶುರು ಮಾಡಿದ್ದೇವೆ. ಜುಲೈ ಅಂತ್ಯದ ವೇಳೆಗೆ ಸರ್ವೆ ಮುಗಿಯಲಿದ್ದು, ನಂತರ ಒತ್ತುವರಿ ತೆರವು ಆರಂಭಿಸುತ್ತೇವೆ. ಸಾರ್ವಜನಿಕವಾಗಿ ಒತ್ತುವರಿಯಾಗಿರುವ ಜಾಗದ ಬಗ್ಗೆ ಮಾಹಿತಿ ನೀಡಿದ ನಂತರ ತೆರವು ಮಾಡಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
ಇದನ್ನೂ ಓದಿ:ರಾಹುಲ್ ಗಾಂಧಿ ದೇಶದ ಹಿಂದೂಗಳ ಕ್ಷಮೆ ಯಾಚಿಸಬೇಕು: ಬಿ.ವೈ.ವಿಜಯೇಂದ್ರ - B Y Vijayendra