ಬೆಂಗಳೂರು:ಉಪ ವಿಭಾಗಾಧಿಕಾರಿ (ಎ.ಸಿ) ಕಂದಾಯ ನ್ಯಾಯಾಲಯದಲ್ಲಿ ಈ ಹಿಂದಿನ ಸರ್ಕಾರ ಉಳಿಸಿ ಹೋಗಿದ್ದ ಹಳೆಯ ತಕರಾರು ಅರ್ಜಿಗಳ ಪೈಕಿ ಶೇ.70ರಷ್ಟು ಪ್ರಕರಣಗಳನ್ನು ಕಳೆದ ಒಂದು ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಿ ಮಾತನಾಡಿದ ಅವರು, ''ಎಸಿ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಸರ್ಕಾರ ನಿಗದಿಪಡಿಸಿರುವ ಕಾಲಮಿತಿ 6 ತಿಂಗಳು ಮಾತ್ರ. ಆದರೆ ಕಳೆದ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕಂದಾಯ ನ್ಯಾಯಾಲಯಗಳ ಪ್ರಕರಣಗ ವಿಳಂಬದ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಪರಿಣಾಮ ರೈತರು ತೀವ್ರ ತೊಂದರೆ ಒಳಗಾಗಬೇಕಾದ ಸ್ಥಿತಿ ಎದುರಾಗಿತ್ತು'' ಎಂದು ವಿಷಾದಿಸಿದರು.
ಅಭಿಯಾನ ಮಾದರಿಯಲ್ಲಿ ವಿಲೇವಾರಿ: ''ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಎಸಿ ನ್ಯಾಯಾಲಯದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ 59,339 ಪ್ರಕರಣಗಳು ವಿಲೇ ಆಗದೆ ಬಾಕಿ ಉಳಿದಿದ್ದವು. ಕಂದಾಯ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇ ಈ ರೀತಿಯಾಗಿ ಮಿತಿಮೀರಿ ವಿಳಂಭವಾಗುವುದರಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗುತ್ತಿರುವುದನ್ನು ಗಮನಿಸಿದ ನಮ್ಮ ಸರ್ಕಾರ ಇದಕ್ಕೊಂದು ಪರಿಹಾರ ನೀಡಲು ತೀರ್ಮಾನಿಸಿತ್ತು. ಬಾಕಿ ಪ್ರಕರಣಗಳನ್ನು ವಿಲೇ ಮಾಡಬೇಕು ಎಂದು ಮಾನ್ಯ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಕಳೆದ ಒಂದು ವರ್ಷದಲ್ಲಿ ಬಾಕಿ ಪ್ರಕರಣಗಳ ವಿಲೇವಾರಿಯನ್ನು ಅಭಿಯಾನ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ'' ಎಂದರು.
''ಎಸಿ ನ್ಯಾಯಾಲಯಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಬಾಕಿ ಇದ್ದ 59,339 ಪ್ರಕರಣಗಳ ಪೈಕಿ ಕಳೆದ ಒಂದು ವರ್ಷದಲ್ಲಿ 44,545 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಹಾಲಿ ಬಾಕಿಯನ್ನು 14,794 ಕ್ಕೆ ಇಳಿಸಲಾಗಿದ್ದು, ಶೇ.70ಕ್ಕೂ ಹೆಚ್ಚು ಪ್ರಗತಿ ಸಾಧಿಸಲಾಗಿದೆ'' ಎಂದು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು.