ಬೆಂಗಳೂರು: ನಗರದ ಜಿಕೆವಿಕೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳಕ್ಕೆ ಭಾನುವಾರ ಅದ್ಧೂರಿ ತೆರೆ ಬಿದ್ದಿದೆ. ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ತಾಲೂಕು ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಡಾ. ಎಂ. ಹೆಚ್. ಮರೀಗೌಡ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಡಾ. ಆರ್. ದ್ವಾರಕೀನಾಥ್ ಅವರಿಗೆ ಅತ್ಯುತ್ತಮ ರೈತ ಪ್ರಶಸ್ತಿ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, ಕೃಷಿ ಅಭಿವೃದ್ಧಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮಹತ್ತರ ಪಾತ್ರ ವಹಿಸುತ್ತಿದೆ. ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿರುವ ಈ ಬೃಹತ್ ಕೃಷಿಮೇಳ ದೇಶದಲ್ಲೇ ಮಾದರಿಯಾಗಿದೆ. ಈ ಮೇಳಕ್ಕೆ ಭೇಟಿ ನೀಡಿದ ರೈತರು ತಾವು ನೋಡಿದ ಕೃಷಿ ತಾಂತ್ರಿಕತೆಗಳು, ತಳಿಗಳ ಬಗ್ಗೆ ಇನ್ನಷ್ಟು ರೈತರಿಗೆ ಮಾಹಿತಿಯನ್ನು ರವಾನಿಸಿದಾಗ ಮಾತ್ರ ಈ ಮೇಳಕ್ಕೆ ಒಂದು ಅರ್ಥ ಸಿಗುತ್ತದೆ ಎಂದರು.
ಈ ಮೇಳದಲ್ಲಿ ಕೃಷಿಯಲ್ಲಿ ನಿರತರಾದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವುದು ಅಭಿನಂದನಾರ್ಹ. ನಮ್ಮ ಯುವಜನತೆ ಡಿಜಿಟಲ್ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಕೃಷಿಯಲ್ಲಿ ಕ್ರಾಂತಿಯನ್ನು ತರಬೇಕಾಗಿದೆ. ಕೃಷಿಯಲ್ಲಿ ಹೆಚ್ಚಿನ ಮಾಹಿತಿ, ತಂತ್ರಜ್ಞಾನದ ಬಳಕೆಯಿಂದಾಗಿ ಇತರೆ ದೇಶಗಳು ಸಹ ನಮ್ಮ ಆಧುನಿಕ ಕೃಷಿಯನ್ನು ಹೊಗಳುವಂತಾಗಿದೆ ಎಂದು ಹೇಳಿದರು.
ಈ ವೇದಿಕೆಯಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ, ತಂತ್ರಜ್ಞಾನ, ಪರಿಕರಗಳು ಮತ್ತು ರುಚಿಯಾದ ಹಳ್ಳಿಯ ಸೊಗಡಿನ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿರುವುದು ಸಂತಸದ ವಿಷಯ. ಈ ನಾಲ್ಕು ದಿನಗಳ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿರುವ ಕೃಷಿ ವಿಶ್ವವಿದ್ಯಾನಿಲಯದ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.