ಹುಬ್ಬಳ್ಳಿ:"2025ರ ಫೆಬ್ರವರಿ 4ರಂದು ಬಸವನಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ಗೆ ಚಾಲನೆ ನೀಡಲಾಗುತ್ತದೆ" ಎಂದು ಮಕಣಾಪುರ ಮಠದ ಸೋಮೇಶ್ವರ ಸ್ವಾಮೀಜಿ ತಿಳಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "1008 ಮಂದಿ ಸಾಧು ಸಂತರ ಪಾದ ಪೂಜೆ ಮಾಡಿ ಉದ್ಘಾಟನೆ ಮಾಡುತ್ತೇವೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ನಮಗೆ ಮಾರ್ಗದರ್ಶನ ಮಾಡಲಿದ್ದಾರೆ" ಎಂದು ಹೇಳಿದರು.
ವಕ್ಫ್-ಡಿ.20ರಂದು ಕಲಬುರಗಿ ಬಂದ್ಗೆ ಕರೆ: "ವಕ್ಫ್ ವಿಚಾರದಿಂದಾಗಿ ಜನರು ಹೆದರಿದ್ದಾರೆ. ಹುಲಿ ಬಂದಾಗ, ಸಿಂಹ ಬಂದಾಗ ಜನರು ಹೇಗೆ ಹೆದರುತ್ತಾರೋ, ಹಾಗೇ ವಕ್ಫ್ ಹೆಸರು ಬಂದಾಗ ಮಠಾಧೀಶರು ಕೂಡ ಹೆದರಿದ್ದಾರೆ. ಹಿಂದೂ ಧರ್ಮ, ಮಠ ಮಂದಿರ ರಕ್ಷಣೆಗೆ ಕ್ರಾಂತಿವೀರ ಬ್ರಿಗೇಡ್ ಸ್ಥಾಪಿಸಲಾಗಿದೆ. ವಕ್ಫ್ ವಿಚಾರವಾಗಿ ಡಿಸೆಂಬರ್ 20ರಂದು ಕಲಬುರಗಿ ಬಂದ್ಗೆ ಕರೆ ಕೊಟ್ಟಿದ್ದೇವೆ. ನಮಗೆ ಈಶ್ವರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ನಮ್ಮ ಸಂಘಟನೆಗೆ ರಾಜಕೀಯ ಉದ್ದೇಶವಿಲ್ಲ. ಯಾವ ಪಕ್ಷದವರು ಬಂದರೂ ಸ್ವಾಗತಿಸುತ್ತೇವೆ. ವಕ್ಫ್ ಅನ್ನೋದು ದೆವ್ವ ಇದ್ದ ಹಾಗೆ. ದೆವ್ವ ನಮ್ಮ ಮುಂದೆ ಬಂದು ನಿಂತಿದೆ" ಎಂದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, "ಸೋಮೇಶ್ವರ ಸ್ವಾಮೀಜಿ ಹೇಳಿದಂತೆ ಫೆಬ್ರವರಿ 4ರಂದು ಬಸವನಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ಗೆ ಚಾಲನೆ ನೀಡಲಾಗುತ್ತದೆ. ರಾಜ್ಯದಲ್ಲಿರುವ ಸಣ್ಣ ಸಣ್ಣ ಮಠಗಳು ತಾತ್ಸಾರಕ್ಕೊಳಗಾಗಿವೆ. ಡಿ.ವಿ.ಸದಾನಂದ ಗೌಡ ಮತ್ತು ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಮಠಗಳಿಗೆ ಹಣ ಬಿಡುಗಡೆ ಮಾಡಿದ್ದರು" ಎಂದು ತಿಳಿಸಿದರು.