ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಅವರ ಎರಡನೇ ಗಂಡು ಮಗುವಿನ ನಾಮಕರಣ ಶಾಸ್ತ್ರ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಫೆಬ್ರವರಿ 19ರ ಬುಧವಾರ ನೆರವೇರಿಸಿದ್ದಾರೆ.
ಯದುವಂಶದ ಪರಂಪರೆಯಂತೆ ಎರಡನೇ ಮಗುವಿಗೆ "ಯುಗಾಧ್ಯಕ್ಷ" ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ. ಮೈಸೂರು ಅರಮನೆಯ ಕನ್ನಡಿ ತೊಟ್ಟಿಯಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ನಾಮಕರಣ ಶಾಸ್ತ್ರ ಕಾರ್ಯಕ್ರಮ ನಡೆಯಿತು.
ಅರಮನೆಯ ಪುರೋಹಿತರು ವಿವಿಧ ಶಾಸ್ತ್ರ ಹಾಗೂ ಧಾರ್ಮಿಕ ಕಾರ್ಯಗಳ ಬಳಿಕ, ಗುರು ಹಿರಿಯರು ಸೂಚಿಸಿದಂತೆ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಅವರ ಎರಡನೇ ಪುತ್ರನಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ಕಿವಿಯಲ್ಲಿ ಮೂರು ಬಾರಿ ಹೇಳುವ ಮೂಲಕ ನಾಮಕರಣ ಮಾಡಲಾಯಿತು.
ನಾಮಕರಣ ಶಾಸ್ತ್ರ ರಾಜವಂಶಸ್ಥರ ಖಾಸಗಿ ಕಾರ್ಯಕ್ರಮವಾಗಿದ್ದು, ಕೆಲವೇ ಕೆಲವು ಮಂದಿ ಸಂಬಂಧಿಕರಿಗೆ ಮಾತ್ರ ಆಹ್ವಾನವಿತ್ತು. ಬಿಗಿ ಭದ್ರತೆಯಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಅರಮನೆ ಸಿಬ್ಬಂದಿಗಳಿಗೂ ಅವಕಾಶವಿರಲಿಲ್ಲ.
2024ರ ಅ. 11 ರಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಆಯುಧ ಪೂಜೆ ನೇರವೇರಿಸಿ ಕಂಕಣ ವಿಸರ್ಜನೆ ಮಾಡಿದ್ದರು. ಅಂದೇ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ದ್ವಿತೀಯ ಪುತ್ರನಿಗೆ ನಾಮಕರಣ ಮಾಡಲಾಗಿದೆ. ಮೊದಲ ಪುತ್ರನಿಗೆ "ಆದ್ಯವೀರ ಒಡೆಯರ್" ಎಂದು ನಾಮಕರಣ ಮಾಡಿದ್ದನ್ನು ಸ್ಮರಿಸಬಹುದು.
ಹೆಸರಿನ ಮಹತ್ವ: "ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್" ಮಹತ್ವದ ಬಗ್ಗೆ ಪುರೋಹಿತರ ವಿಶ್ಲೇಷಣೆ ಮಾಡಿದ್ದಾರೆ. ಹೆಸರನ್ನು ನಾಲ್ಕು ವಿಭಾಗವಾಗಿ ವಿಂಗಡಿಸಿ, ಅರ್ಥ ವಿವರಿಸಲಾಗಿದೆ.
- ಯುಗ ಎಂದರೆ ಯುಗದ ಅಧಿಪತಿ. ಸನಾತನ ಧರ್ಮದಲ್ಲಿ ನಾಲ್ಕು ಯುಗಗಳ ಉಲ್ಲೇಖವಿದೆ. ಅವುಗಳಲ್ಲಿ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ.
- ಅಧ್ಯಕ್ಷ ಪದದ ಅರ್ಥ ಸಮರ್ಥ, ತಜ್ಞ, ಕೌಶಲ್ಯ ಅಥವಾ ಪ್ರಾಮಾಣಿಕ ಎಂಬ ಅರ್ಥ ಬರುತ್ತದೆ. ಹಾಗಾಗಿ ಒಂದು ಗುಂಪಿನ ನಾಯಕ, ಅಧ್ಯಕ್ಷ ಎಂತಲೂ ವಿಶ್ಲೇಷಿಸಲಾಗಿದೆ.
- ಕೃಷ್ಣ ಎಂದರೆ ಕಪ್ಪು ಅಥವಾ 'ಸರ್ವ ಆಕರ್ಷಕ' ಎಂದರ್ಥ. ಈ ಹೆಸರು ಸಂಸ್ಕ್ರತ ಪದ ಕೃಷ್ಣದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಇದನ್ನು ಹೆಚ್ಚಾಗಿ ಕೃಷ್ಣ ದೇವರಿಗೆ ಭಕ್ತಿಯ ಇತಿಹಾಸ ಹೊಂದಿರುವ ಕುಟುಂಬದಲ್ಲಿ ಜನಿಸಿದ ಹುಡುಗರಿಗೆ ಹೆಸರಿಡಲಾಗುತ್ತದೆ. ಕೃಷ್ಣ ಹೆಸರಿನ ಮಗುವನ್ನು ದೇವರಂತೆ. ದಯೆ ಮತ್ತು ಕರುಣಾಮಯಿ ವ್ಯಕ್ತಿಯಾಗಿ ಬೆಳೆಯುವ ಭರವಸೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಒಡೆಯರ್ ಎಂದರೆ ದೊರೆಗಳು, ಯದುವಂಶ ಅಥವಾ ಯಾದವ ವಂಶಕ್ಕೆ ಸೇರಿದವರು ಎಂದು ಪುರೋಹಿತ ವಿಶ್ಲೇಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್ ಒಡೆಯರ್, "ನಾಮಕರಣ ಶಾಸ್ತ್ರ ಕುಟುಂಬದ ಸಂಪ್ರದಾಯದಂತೆ ನಡೆದಿದೆ. ಇದು ಖಾಸಗಿ ಕಾರ್ಯಕ್ರಮ ಕೆಲವು ನೆಂಟರಸ್ಥರಿಗಷ್ಟೇ ಆಹ್ವಾನ ನೀಡಲಾಗಿತ್ತು. ಕಳೆದ ಬುಧವಾರ ಅರಮನೆಯಲ್ಲಿ ನಾಮಕರಣ ಶಾಸ್ತ್ರ ನಡೆಯಿತು" ಎಂದು ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಆಯುಧ ಪೂಜೆ ದಿನವೇ ಯದುವಂಶಕ್ಕೆ ಸಿಹಿ ಸುದ್ದಿ: ಯದುವೀರ್ - ತ್ರಿಷಿಕಾ ದಂಪತಿಗೆ 2ನೇ ಮಗು ಜನನ