ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ ಸಾರಥ್ಯದ ಇತ್ತೀಚಿನ 'ಎಮರ್ಜೆನ್ಸಿ' ಚಿತ್ರ ಮುಂದಿನ ತಿಂಗಳು ಒಟಿಟಿ ಪ್ಲ್ಯಾಟ್ಫಾರ್ಮ್ನಲ್ಲಿ ಲಭ್ಯವಾಗಲಿದೆ. ಹಲವು ಬಾರಿ ಮುಂದೂಡಲ್ಪಟ್ಟ ಈ ಚಿತ್ರ 2025ರ ಜನವರಿ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದಾಗ್ಯೂ, ಬಾಕ್ಸ್ ಆಫೀಸ್ ವಿಚಾರದಲ್ಲಿ ನಿರೀಕ್ಷಿತ ಸಾಧನೆ ಮಾಡಲಿಲ್ಲ. ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಇದೀಗ ಚಿತ್ರ ಒಟಿಟಿ ಪ್ರವೇಶಿಸಲು ಅಣಿಯಾಗುತ್ತಿದೆ.
ಯಾವ ಒಟಿಟಿ, ಯಾವಾಗ ರಿಲೀಸ್?: ಜನಪ್ರಿಯ ಒಟಿಟಿ ಪ್ಲ್ಯಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಶೀಘ್ರದಲ್ಲೇ ಮೂಡಿ ಬರಲಿದೆ ಎಂದು ಕಂಗನಾ ರಣಾವತ್ ತಿಳಿಸಿದ್ದಾರೆ. 'ಎಮರ್ಜೆನ್ಸಿ' ಒಟಿಟಿ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಲಾಗಿದೆ. ಮಾರ್ಚ್ 17ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.
ತುರ್ತುಪರಿಸ್ಥಿತಿ ಘೋಷಣೆ ಕುರಿತಾದ ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಅವರೇ ಬರೆದು, ನಿರ್ದೇಶಿಸಿ, ನಟಿಸಿ, ನಿರ್ಮಿಸಿದ್ದಾರೆ. ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ರಾಜಕೀಯ ಜೀವನವನ್ನು ಈ ಚಿತ್ರ ಆಧರಿಸಿದೆ.
ಚಿತ್ರತಂಡ ಹೀಗಿದೆ...: ಬಾಲಿವುಡ್ ಕಲಾವಿದರಾದ ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ದಿ.ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಾಡೆ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2023ರಲ್ಲೇ ಈ ರಾಜಕೀಯ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ 2024ರಲ್ಲೂ ಚಿತ್ರಕ್ಕೆ ಬಿಡುಗಡೆ ಭಾಗ್ಯ ಸಿಗಲಿಲ್ಲ. ಹಲವು ಬಾರಿ ಮುಂದೂಡಿಕೆಯಾದ ಸಿನಿಮಾ 2025ರ ಜನವರಿ 17ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತು. ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ ಬ್ಯಾನರ್‌ಗಳು ಜಂಟಿಯಾಗಿ ನಿರ್ಮಿಸಿವೆ. 60 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರ ಕೇವಲ 21 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ನಾಳೆ 'ಎಮರ್ಜೆನ್ಸಿ' ರಿಲೀಸ್: ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿದ 5 ಪ್ರಮುಖ ಕಲಾವಿದರಿವರು
ಕಂಗನಾ ಅಭಿನಯದ 2023ರ ಚಿತ್ರ 'ತೇಜಸ್' ಮೊದಲ ದಿನ 1.25 ಕೋಟಿ ರೂ. ಗಳಿಸಿತ್ತು. 2022ರ ಚಿತ್ರ 'ಧಾಕಡ್' ಮೊದಲ ದಿನ 1.2 ಕೋಟಿ ರೂ.ಗೆ ಸೀಮಿತವಾಗಿತ್ತು. 2021ರಲ್ಲಿ ಬಿಡುಗಡೆಯಾದ ಪೊಲಿಟಿಕಲ್ ಡ್ರಾಮಾ 'ತಲೈವಿ' ಮೊದಲ ದಿನ 1.46 ಕೋಟಿ ರೂ. ಗಳಿಸಿತ್ತು. ಈ ಚಿತ್ರದಲ್ಲಿ ಕಂಗನಾ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2020ರ 'ಪಂಗಾ' ಚಿತ್ರವು 2.70 ಕೋಟಿ ರೂ. ಗಳಿಸಿ ಓಪನಿಂಗ್ ಪಡೆದಿತ್ತು. ಭಾರತದ ಏಕೈಕ ಮಹಿಳಾ ಪ್ರಧಾನಿ ಜೀವನಾಧಾರಿತ ಚಿತ್ರ ಆರಂಭದಲ್ಲಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ ನಿರೀಕ್ಷೆಗಳನ್ನು ತಲುಪುವಲ್ಲಿ 'ಎಮರ್ಜೆನ್ಸಿ' ವಿಫಲವಾಯಿತು.
ಇದನ್ನೂ ಓದಿ: ತ್ರಿಭಾಷಾ ನೀತಿ: 'ಹಾಸ್ಯಾಸ್ಪದ ಆಟ ನಮ್ಮೊಂದಿಗೆ ನಡೆಯಲ್ಲ' ಎಂದ ಪ್ರಕಾಶ್ ರಾಜ್