ಮುಂಬೈ(ಮಹಾರಾಷ್ಟ್ರ): ಓಪನ್ ಸೋರ್ಸ್ ಎನ್ಸೈಕ್ಲೋಪೀಡಿಯಾ ವಿಕಿಪಿಡಿಯಾದಲ್ಲಿನ ಛತ್ರಪತಿ ಸಂಭಾಜಿ ಮಹಾರಾಜರ ಕುರಿತಾದ ಆಕ್ಷೇಪಾರ್ಹ ಬರಹವನ್ನು ಅಳಿಸಿ ಹಾಕದ ಕಾರಣಕ್ಕೆ ವಿಕಿಪೀಡಿಯಾದ ಕನಿಷ್ಠ ನಾಲ್ವರು ಸಂಪಾದಕರ ವಿರುದ್ಧ ಮಹಾರಾಷ್ಟ್ರ ಸೈಬರ್ ಸೆಲ್ ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ ಮೂಲದ ವಿಕಿಮೀಡಿಯಾ ಫೌಂಡೇಶನ್ಗೆ ಮಹಾರಾಷ್ಟ್ರ ಸೈಬರ್ ಸೆಲ್ ನೋಟಿಸ್ ಕಳುಹಿಸಿದ್ದು, ವಿಕಿಪೀಡಿಯಾದಿಂದ ಮಾಹಿತಿಯನ್ನು ತೆಗೆದುಹಾಕುವಂತೆ ವಿನಂತಿಸಿದೆ. ವಿಕಿಮೀಡಿಯ ಫೌಂಡೇಶನ್ ಇದು ವಿಕಿಪೀಡಿಯಾವನ್ನು ನಿರ್ವಹಿಸುವ ಲಾಭರಹಿತ ಸಂಸ್ಥೆಯಾಗಿದೆ.
"ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಅವರ ಪುತ್ರ ಸಂಭಾಜಿ ಮಹಾರಾಜರಿಗೆ ಭಾರತದಲ್ಲಿ ಅತ್ಯಂತ ಗೌರವದ ಸ್ಥಾನಮಾನವಿದೆ. ಆದರೆ ವಿಕಿಪೀಡಿಯಾದಲ್ಲಿ ಅವರ ಬಗ್ಗೆ ಪ್ರಕಟಿಸಲಾದ ಮಾಹಿತಿಗಳು ತಪ್ಪಾಗಿದೆ. ಇಂಥ ತಪ್ಪು ಮಾಹಿತಿಗಳು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣವಾಗಬಹುದು. ವಿಕಿಪೀಡಿಯಾದಲ್ಲಿ ಪೋಸ್ಟ್ ಮಾಡಿದ ಮಾಹಿತಿಯು ಅವರ ಅನುಯಾಯಿಗಳಲ್ಲಿ ಅಶಾಂತಿಗೆ ಕಾರಣವಾಗಬಹುದು" ಎಂದು ಮಹಾರಾಷ್ಟ್ರ ಸೈಬರ್ ಸೆಲ್ ನೋಟಿಸ್ನಲ್ಲಿ ಉಲ್ಲೇಖಿಸಿದೆ.
ಆದರೆ ಕಂಟೆಂಟ್ ಅನ್ನು ತೆಗೆದುಹಾಕುವ ಬಗ್ಗೆ ವಿಕಿಮೀಡಿಯಾದಿಂದ ಯಾವುದೇ ಉತ್ತರ ಬರದ ಕಾರಣ, ಮಹಾರಾಷ್ಟ್ರ ಸೈಬರ್ ಸೆಲ್ ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ವಿಕಿಪೀಡಿಯಾದ ಕನಿಷ್ಠ ನಾಲ್ಕು ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿ ಹೇಳಿದರು.
ವಿಕಿಪೀಡಿಯಾ ಒಂದು ಉಚಿತ-ಕಂಟೆಂಟ್ ಆನ್ ಲೈನ್ ವಿಶ್ವಕೋಶವಾಗಿದ್ದು, ಮುಕ್ತ ಸಹಯೋಗದ ಮೂಲಕ ಸ್ವಯಂಸೇವಕರ ಸಮುದಾಯವು ಇದರಲ್ಲಿ ಕಂಟೆಂಟ್ಗಳನ್ನು ಪೋಸ್ಟ್ ಮಾಡುತ್ತದೆ ಮತ್ತು ನಿರ್ವಹಿಸುತ್ತದೆ. ಕೆಲ ನಿರ್ದಿಷ್ಟ ವ್ಯಕ್ತಿಗಳು ಈ ವೇದಿಕೆಯಲ್ಲಿ ಕಂಟೆಂಟ್ ಅನ್ನು ಅಪ್ಲೋಡ್ ಮಾಡಬಹುದು ಎಂದು ಅವರು ತಿಳಿಸಿದರು.
ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದ ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಚಿತ್ರ "ಚಾವಾ" ಹಿನ್ನೆಲೆಯಲ್ಲಿ ಈ ಆಕ್ಷೇಪಣೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: 'ತ್ರಿಭಾಷಾ ಸೂತ್ರ ಒಪ್ಪಲ್ಲ, ತಮಿಳು ನಮ್ಮ ಹಕ್ಕು'; ಸಚಿವ ಪ್ರಧಾನ್ಗೆ ಡಿಸಿಎಂ ಉದಯನಿಧಿ ತಿರುಗೇಟು - NEP ROW