ಉಡುಪಿ: ಜಿಲ್ಲೆಯ ಮಲ್ಪೆ ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದ ದಕ್ಕೆಯ ಸಮೀಪ ನಿಲ್ಲಿಸಲಾಗಿದ್ದ ಬೋಟ್ಗೆ ಗುರುವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಇದರಿಂದಾಗಿ ಅಂದಾಜು 15 ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಮಲ್ಪೆಯ ಜನಾರ್ದನ ಟಿ.ಕಾಂಚನ್ ಎಂಬವರಿಗೆ ಸೇರಿದ ‘ರವಿಪ್ರಕಾಶ್’ ಸಣ್ಣಟ್ರಾಲ್ (ಫಿಶಿಂಗ್) ಬೋಟು ಸುಟ್ಟುಹೋಗಿದೆ. ಮೀನುಗಾರಿಕೆ ಮುಗಿಸಿ ಬಂದು ಬೋಟ್ ಅನ್ನು ದಕ್ಕೆಯಲ್ಲಿ ನಿಲ್ಲಿಸಲಾಗಿತ್ತು. ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಬೋಟಿನ ಸುತ್ತ ಸುಮಾರು 25ರಿಂದ 30 ಬೋಟುಗಳು ನಿಂತಿದ್ದವು. ರಾತ್ರಿ ಸಮಯ ಸಮುದ್ರದ ನೀರಿನ ಮಟ್ಟ ಏರಿಕೆ ಇರುವುದರಿಂದ ಇತರ ಯಾವುದೇ ಬೋಟ್ಗಳಿಗೆ ಬೆಂಕಿ ವ್ಯಾಪಿಸಿಲ್ಲ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಬೆಂಕಿಗಾಹುತಿಯಾದ ಬೋಟಿನಲ್ಲಿ ಬಲೆ, 200 ಲೀ. ಡೀಸೆಲ್, ಜಿಪಿಎಸ್, ಫಿಶ್ ಫೈಂಡರ್, ಲೈಫ್ ಜಾಕೆಟ್, ವಾಟರ್ ಟ್ಯಾಂಕರ್, ಬಾಕ್ಸ್ ಮುಂತಾದ ವಸ್ತುಗಳಿದ್ದವು. ಬೆಂಕಿ ತಗುಲಿದ ಸಂದರ್ಭದಲ್ಲಿ ಸ್ಥಳೀಯ ದೋಣಿಯವರು ಗಮನಿಸಿ ಮಾಹಿತಿ ನೀಡಿದ್ದರಿಂದ ಸಕಾಲದಲ್ಲಿ ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್: 11 ಜನರು ಅರೆಸ್ಟ್, 7 ವಾಹನಗಳ ಜಪ್ತಿ