ಫಿರೋಜ್‌ಪುರ(ಪಂಜಾಬ್): ಇತ್ತೀಚೆಗೆ ದೆಹಲಿ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆಯ ಭಾಗವಾಗಿ ಹಾಗೂ ಪ್ರತಿಭಟನೆಯನ್ನು ಬೆಂಬಲಿಸುವ ಸಲುವಾಗಿ ಕೆನಡಾದ ಅನಿವಾಸಿ ಭಾರತೀಯ ಜೋಡಿಯೊಂದು ತಾಜಾ ಹಸಿರು ಹುಲ್ಲಿನಿಂದ ಕೂಡಿದ್ದ ಭತ್ತದ ಗದ್ದೆಯಲ್ಲಿಯೇ ಮದುವೆಯಾಗುವ ಮೂಲಕ ವಿಶೇಷವಾಗಿ ಗಮನ ಸೆಳೆದರು. ದುರ್ಲಭ್ ಮತ್ತು ಹರ್ಮನ್ ಈ ರೀತಿ ಮದುವೆಯಾದ ಜೋಡಿ.
ಪಂಜಾಬ್‌ನ ಗಡಿ ಜಿಲ್ಲೆ ಫಿರೋಜ್‌ಪುರದ ಕರಿಕಲಾನ್ ಎಂಬ ಗ್ರಾಮದಲ್ಲಿ ಇಂಥದ್ದೊಂದು ಮದುವೆ ನಡೆಯಿತು. ಭತ್ತದ ಬೆಳೆಗಳ ನಡುವೆ ಸಿದ್ಧಗೊಂಡಿದ್ದ ಮಂಟಪದವರೆಗೆ ಮದುಮಗಳನ್ನು ಮೆರವಣಿಗೆಯ ಮೂಲಕ ಕರೆತರಲಾಗಿತ್ತು. ಮದುವೆ ಮಂಟಪದಿಂದ ಹಿಡಿದು ಸಿಹಿತಿಂಡಿಗಳವರೆಗೆ ಎಲ್ಲವೂ ರೈತಾಪಿ ಸಂಪ್ರದಾಯವನ್ನು ಸೂಚಿಸುತ್ತಿದ್ದವು.

ಸಿಹಿತಿಂಡಿಗಳ ಪೆಟ್ಟಿಗೆಗಳನ್ನು ರೈತರ ಘೋಷಣೆಗಳಿಂದ ಅಲಂಕರಿಸಲಾಗಿತ್ತು. ಸಿಹಿತಿಂಡಿಗಳ ಜೊತೆಗೆ ಜೇನುತುಪ್ಪ ವಿತರಿಸಲಾಗಿತ್ತು. ವರ ಧರಿಸಿದ ಶೇರ್ವಾನಿಯಲ್ಲಿ ಗೋಧಿ ತೆನೆಗಳ ವಿನ್ಯಾಸವಿತ್ತು. ತಂಪಾದ ಗಾಳಿಯ ಮಧ್ಯೆ ಗದ್ದೆಯಲ್ಲಿ ಹಾಕಲಾಗಿದ್ದ ಟೆಂಟ್ ನೋಡಲು ಆಕರ್ಷಕವಾಗಿತ್ತು. ನವದಂಪತಿ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ಕೊಟ್ಟರು.

"ರೈತರ ಹೋರಾಟಕ್ಕೆ ಕೆನಡಾದಿಂದ ನಮ್ಮಿಂದ ಸಾಧ್ಯವಾದಷ್ಟು ಬೆಂಬಲ ನೀಡಿದೆವು. ನಮ್ಮ ಇಡೀ ಜೀವನವನ್ನು ಕೃಷಿಗೆ ಮೀಸಲಿಡಬೇಕೆಂದು ಈ ನಿರ್ಧಾರ ಮಾಡಿದ್ದೇವೆ. ಬೆಳೆದು ನಿಂತ ಬೆಳೆಗಳ ನಡುವೆ ಟೆಂಟ್‌ಗಳನ್ನು ಹಾಕಿಕೊಂಡು ಹೊಲಗಳಲ್ಲಿ ಮದುವೆಯಾಗಬೇಕೆಂದು ಇಬ್ಬರು ಮಾತನಾಡಿಕೊಂಡಿದ್ದೆವು" ಎಂದು ನವದಂಪತಿ ದುರ್ಲಭ್ ಮತ್ತು ಹರ್ಮನ್ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕದ ಶಿಕ್ಷಕಿಯ ವರಿಸಿದ ಆಂಧ್ರದ ವೈದ್ಯ: ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ- ವಿಡಿಯೋ - AP MAN MARRIED AMERICAN GIRL