ಬೆಳಗಾವಿ: ಇಲ್ಲಿಯವರೆಗೂ ಮೋದಿ ಮಾಡೆಲ್, ಮೋದಿ ಗ್ಯಾರಂಟಿ ಎನ್ನುತ್ತಿದ್ದ ಬಿಜೆಪಿ ನಾಯಕರು ಇಂದು ಭಾವನಾತ್ಮಕ ವಿಷಯ, ದೇಶ ವಿಭಜನೆ, ಕೋಮುವಾದ, ಹಿಂದೂ ಮುಸ್ಲಿಂ ವಿಭಜನೆ ವಿಚಾರಗಳ ಮೂಲಕ ಮಾತ್ರ ಮತ ಪಡೆಯಲು ಸಾಧ್ಯ ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಅವರ ಹಳೆಯ, ನಿಜವಾದ ಹಿಡನ್ ಅಜೆಂಡಾಗೆ ಜೋತು ಬಿದ್ದಿದ್ದರಿಂದ ಅವರ ಮುಖವಾಡ ಈಗ ಕಳಚಿ ಬಿದ್ದಿದೆ ಎಂದು ಕೆಪಿಸಿಸಿ ವಕ್ತಾರೆ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಮಹಿಳೆಯರಿಗೆ ಅವಕಾಶ ಕೊಡಬೇಕು. ನಾರಿ ಶಕ್ತಿ ಮಾಡಲ್, ಹಾಸನದ ಸೆಕ್ಸ್ ಕ್ಯಾಂಡಲ್ಗೆ ನಿಮ್ಮ ತ್ವರಿತವಾದ ಪ್ರತಿಕ್ರಿಯೆ ಏನು? ನಿಮ್ಮ ಸರ್ಕಾರದಲ್ಲಿ ಬಾಯಿ ಮುಚ್ಚಿಕೊಂಡು ಇರುವ ಮಹಿಳೆಯರ ಬದಲು ಸಮರ್ಥ ಮಹಿಳೆಯರಿಗೆ ಅವಕಾಶ ಸಿಗಲ್ಲ. ಮಾತನಾಡುವ, ಪ್ರಶ್ನಿಸುವ ಮಹಿಳೆಯರಿಗೆ ಬಿಜೆಪಿಯಲ್ಲಿ ಅವಕಾಶ ಇಲ್ಲ ಎಂದು ಕಿಡಿಕಾರಿದರು.
ಮಹಿಳೆಯರ ಜತೆ ಅಶ್ಲೀಲವಾಗಿ ನಡೆದುಕೊಂಡಿರುವ ಜೆಡಿಎಸ್ ಪಕ್ಷದ ಜತೆ ಬಿಜೆಪಿಗರು ಹೇಗಿರುತ್ತಾರೆ?. ಹೊಳೆನರಸೀಪುರ, ರಾಜ್ಯದ ಮಾನ ಮರ್ಯಾದೆ ಹಾಳಾಗಿದೆ. ಹೆಣ್ಣು ಮಕ್ಕಳಿಗೆ ಯಾವ ರೀತಿ ಗೌರವ ನೀಡಬೇಕು ಎಂಬ ಪರಿಜ್ಞಾನ ಇಲ್ಲವೇ ನಿಮಗೆ..? ನಿಮ್ಮ ತಂದೆಯವರು ಇದನ್ನೇ ಕಲಿಸಿಕೊಟ್ಟಿದ್ದಾರಾ..? ಇಡೀ ಕರ್ನಾಟಕ, ಹಳೆ ಮೈಸೂರಿನ ಮಾನ ಮರ್ಯಾದೆ ಹರಾಜಾಗಿದೆ. ಮಹಿಳೆಯರ ಘನತೆ ಬಗ್ಗೆ ಮಾತನಾಡುವ ನೀವು ಇಂಥ ಜೆಡಿಎಸ್ ಪಕ್ಷದ ಜೊತೆಗೆ ರಾಜಕೀಯ ಹೊಂದಾಣಿಕೆ ಮುಂದುವರಿಸುತ್ತೀರಾ..? ಎಂದು ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್, ಪ್ರಧಾನಿ ಮೋದಿ, ಜೋಶಿ ಅವರನ್ನು ಪ್ರಶ್ನಿಸಿದರು.