ಕರ್ನಾಟಕ

karnataka

ETV Bharat / state

ಹುಟ್ಟಿದ್ದು ತಮಿಳುನಾಡು, ಬೆಳೆದಿದ್ದು ಕರ್ನಾಟಕ: ಸಂಕಷ್ಟದಲ್ಲಿರುವ 'ಮಂಕಿ ಮ್ಯಾನ್' ಕೋತಿರಾಜ್​ಗೆ ಬೇಕಿದೆ ಸರ್ಕಾರದ ಆಸರೆ - KOTHIRAJ

'ಮಂಕಿ ಮ್ಯಾನ್ ಆಫ್ ಕರ್ನಾಟಕ' ಎಂಬ ಖ್ಯಾತಿ ಪಡೆದಿರುವ ಕೋತಿರಾಜ್​ ಇದೀಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ವಾಸ್ತವ್ಯಕ್ಕೊಂದು ತನ್ನದೇ ಆದ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿಯೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.

Kothiraj climbing the rock
ಬಂಡೆ ಹತ್ತುತ್ತಿರುವ ಕೋತಿರಾಜ್ (ETV Bharat)

By ETV Bharat Karnataka Team

Published : Oct 21, 2024, 9:21 PM IST

Updated : Oct 21, 2024, 10:35 PM IST

ಚಿತ್ರದುರ್ಗ: ಕೋತಿರಾಜ್. ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?. 'ಮಂಕಿ ಮ್ಯಾನ್ ಆಫ್ ಕರ್ನಾಟಕ' ಎಂದೇ ಇವರು ಜನಪ್ರಿಯ. ಇದಕ್ಕೆ ಕಾರಣ ಇವರ ಬಂಡೆ ಹತ್ತುವ ಸಾಹಸ. 2006ರಲ್ಲಿ ಈ ಸಾಹಸ ಆರಂಭಿಸಿದ ಕೋತಿರಾಜ್ ಇಡೀ ದೇಶಾದ್ಯಂತ ಖ್ಯಾತಿ ಗಳಿಸಿದ್ದಾರೆ.

ಸಂಕಷ್ಟದಲ್ಲಿರುವ ಜನರ ಪ್ರಾಣ ಉಳಿಸಲು, ಮೃತದೇಹಗಳ ಪತ್ತೆ ಕಾರ್ಯದಲ್ಲಿ ಕೋತಿರಾಜ್ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಉದಾಹರಣೆಗಳಿವೆ. ಜೋಗ ಜಲಪಾತವನ್ನು ಸಾಕಷ್ಟು ಬಾರಿ ಹತ್ತಿಳಿದಿರುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ವಿಪರ್ಯಾಸವೆಂದರೆ ಇವರೀಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇರಲು ಸ್ವಂತದ್ದೊಂದು ಮನೆ ಇಲ್ಲದೆ ಬಾಡಿಗೆ ಮನೆಯಲ್ಲೇ ಇವರ ಬದುಕು. ಇದರ ನಡುವೆ ಯುವ ಜನತೆಗೆ ಊಟ, ವಸತಿ ನೀಡಿ ಕ್ಲೈಂಬಿಂಗ್ ತರಬೇತಿ ನೀಡುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ನೆಲೆಸಿರುವ ಕೋತಿರಾಜ್ ಹುಟ್ಟಿದ್ದು ನೆರೆಯ ತಮಿಳುನಾಡಿನಲ್ಲಿ. ಬೆಳೆದಿದ್ದು, ಜನ ಹರಸಿ ಹಾರೈಸಿದ್ದೆಲ್ಲವೂ ಕರ್ನಾಟಕದಲ್ಲಿ. ಗಾರೆ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಇವರು ಕೋತಿಗಳು ಬಂಡೆ ಹತ್ತುವುದನ್ನು ಗಮನಿಸಿ ಈ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿ ಇದೀಗ ಮನೆ ಮಾತಾಗಿದ್ದಾರೆ.

ಬಂಡೆ ಹತ್ತುವ ತರಬೇತಿ (ETV Bharat)

ಇದಕ್ಕೂ ಮುನ್ನ ಇವರು ಮನೆ ಬಿಟ್ಟು ತಮಿಳುನಾಡಿನಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದರು. ಚಿತ್ರದುರ್ಗ ತಾಲೂಕಿನ ಬಿಜಾಪುರ ಗೊಲ್ಲರಹಟ್ಟಿಯ ಮಹಾದೇವಪ್ಪ ಎಂಬವರು ಕೋತಿರಾಜ್​ ಅವರನ್ನು ಸಾಕಿ ಬೆಳೆಸಿದವರು. ತಂದೆ-ತಾಯಿಯನ್ನು ಬಿಟ್ಟು ಚಿಕ್ಕ ವಯಸ್ಸಿನಲ್ಲೇ ದೂರವಾಗಿದ್ದ ಕೋತಿರಾಜ್, 2009ರಲ್ಲಿ ಅಂದಿನ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿದ್ದ ಆದಿತ್ಯ ಬಿಸ್ವಾಸ್ ಅವರ ಸಹಾಯದಿಂದ ತಂದೆ-ತಾಯಿಯನ್ನು ಮತ್ತೆ ಸೇರಿದ್ದರು.

ಇರಲೊಂದು ಸ್ವಂತ ಮನೆ ಇಲ್ಲ: ಸ್ವಂತಕ್ಕೊಂದು ಮನೆ ಇಲ್ಲದೆ ಕೋತಿರಾಜ್ ಅವರನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲವಂತೆ. ಕ್ಲೈಂಬರ್ ಎಂಬ ಕಾರಣಕ್ಕೆ ಹೆಣ್ಣು ಕೊಡ್ತಿಲ್ಲ ಅನ್ನೋದು ಅವರ ನೋವು.

"ನೀನು ಬಿದ್ದು ಏನಾದರೂ ಮಾಡಿಕೊಂಡರೆ ಏನ್ ಮಾಡೋದು? ಎಂದು ಮದುವೆ ಮಾಡಿಕೊಡಲು ಯಾರೂ ಮುಂದೆ ಬರುತ್ತಿಲ್ಲ. ಅಕ್ಕನ ಮಕ್ಕಳಿದ್ದಾರೆ. ಮದುವೆ ಆಗೋಣ ಅಂದರೆ ಮನೆ ಇಲ್ಲ. ಬರಿಗೈಯಲ್ಲಿ ನಿಂತಿದ್ದೇನೆ" ಎಂದು ಕೋತಿರಾಜ್ ಅಳಲು ತೋಡಿಕೊಂಡರು.

ಬಂಡೆ ಹತ್ತುವ ತರಬೇತಿ (ETV Bharat)

ಬುರ್ಜ್ ಖಲೀಫಾ ಕಟ್ಟಡವನ್ನು ಹತ್ತಿ ಭಾರತದ ಕೀರ್ತಿ ಪತಾಕೆ ಹಾರಿಸಲು ಹೋಗಿದ್ದ ಕೋತಿರಾಜ್‌ಗೆ ಅವಕಾಶ ಸಿಗಲಿಲ್ಲ. ಇದೀಗ ನಮ್ಮ ದೇಶದಲ್ಲೇ 50 ಮಹಡಿಯ ಕಟ್ಟಡ ಹತ್ತಲು ಸಿದ್ಧತೆ ನಡೆಸುತ್ತಿದ್ದಾರೆ.

ಜೋಗದಲ್ಲಿ ಕೋತಿರಾಜ್ ಸಾಹಸ: ಶವಗಳನ್ನು ಹುಡುಕಲು ಕೋತಿರಾಜ್ ಅನೇಕ ಬಾರಿ ಜೋಗ ಜಲಪಾತವನ್ನು ಇಳಿದು ಏರಿದ್ದಾರೆ. ಜಲಪಾತದ ಕಂದಕಕ್ಕೆ ಬಿದ್ದು, ಎರಡು ದಿನ ಕಾಣೆಯಾಗಿದ್ದರು. ಇಲ್ಲಿಯತನಕ ಅವರಿಗೆ ಒಟ್ಟು 11 ಆಪರೇಷನ್‌ ಆಗಿದೆ. ಕೈ, ಕಾಲಿಗೆ 4 ರಾಡ್ ಹಾಕಿಸಿಕೊಂಡಿದ್ದಾರೆ. ಆದರೆ, ಇವರು ಬಂಡೆಗಳನ್ನು ಹತ್ತಿ ಬಿದ್ದಿರುವುದು ಕಡಿಮೆ. ಅವರಿವರನ್ನು ಕಾಪಾಡಲು ಹೋದಾಗ ಬಿದ್ದು ಗಾಯಳಾಗಿರುವುದೇ ಹೆಚ್ಚು ಅನ್ನೋದು ಅವರ ಮಾತು.

900 ಅಡಿ ಆಳದ ಜೋಗದಲ್ಲಿ ಸುಮಾರು ಸರಿ ಇಳಿದಿದ್ದಾರೆ. ಅಷ್ಟೇಕೆ? ದೇಶಾದ್ಯಂತ ಜನರ ಕಾಪಾಡಲು ಹೋಗಿದ್ದಾರೆ. ಜೋಗ ಒಂದರಲ್ಲೇ ಒಟ್ಟು 9 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಜಲಪಾತವನ್ನು 18 ಬಾಕಿ ಹತ್ತಿಳಿದಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಪೈಕಿ 3 ಬಾರಿ ಶೂಟಿಂಗ್​ಗಾಗಿ ಹತ್ತಿದ್ದಾರೆ. ಕೆರೆ, ಬಾವಿಯಲ್ಲಿ ಅವರಿವರು ಬಿದ್ರೆ ಸಹಾಯ ಮಾಡ್ತಿದ್ದಾರೆ.

ಕೋತಿರಾಜ್ ಹೇಳಿಕೆ (ETV Bharat)

"ಯಾರೇ ಬಿದ್ರೂ ನಮ್ಮ ತಂಗಿ, ತಮ್ಮ ಎಂದುಕೊಂಡು ಕಾಪಾಡಲು ಹೋಗ್ತೇ‌ನೆ. ಜೋಗದಲ್ಲಿ ಇಳಿದಾಗ ನಾನು ಉಳಿಯಲ್ಲ ಎಂದುಕೊಂಡಿದ್ದೆ. ಆ ದೇವರು ದೊಡ್ಡವನು, ಕಾಪಾಡಿದ. ಕರ್ನಾಟಕದ ಜನರ ಆಶೀರ್ವಾದದಿಂದ ಬದುಕಿದೆ" ಎಂದು ಕೋತಿರಾಜ್ ಹೇಳಿದರು.

ಇಲ್ಲಿಯತನಕ ಒಟ್ಟು 50ಕ್ಕೂ ಹೆಚ್ಚು ಯುವಕರಿಗೆ ಕೋತಿರಾಜ್ ತರಬೇತಿ ನೀಡಿದ್ದಾರೆ. ಪ್ರಸ್ತುತ 10 ಯುವಕರು ತರಬೇತಿ ಪಡೆಯುತ್ತಿದ್ದಾರೆ. ಬಂಡೆ ಹತ್ತುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಇವರಿಂದ ತರಬೇತಿ ಪಡೆದ 16-20 ಯುವಕರು ಸೇನೆ ಸೇರಿದ್ದಾರೆ. ಇಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ್ದಾರೆ.

ತರಬೇತಿ ನೀಡಲು ಬೇಕಿದೆ ಸೇಫ್ಟಿ ವಾಲ್: ಆದರೆ ಯುವಕರಿಗೆ ತರಬೇತಿ ನೀಡಲು ಇವರಿಗೆ ಹಣದ ಅವಶ್ಯಕತೆ ಇದೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸ್ವಂತಕ್ಕೆ ಏನೂ ಇಲ್ಲ. ಮೆಡಲ್ ಗೆಲ್ಲುವ ಕನಸಿದೆ. ಮನೆ ಇಲ್ಲ, ವಾಲ್ ಕಟ್ಟಿಕೊಳ್ಳಲು ಜಾಗ ಇಲ್ಲ. ಸರ್ಕಾರ ನೆರವು ನೀಡಿದರೆ ಉಪಯೋಗ ಆಗುತ್ತದೆ.‌ ಕೆಲವರು ಆರ್ಟಿಫಿಷಿಯಲ್ ವಾಲ್ ಕಟ್ಟಿಕೊಡಲು ಸಿದ್ದರಿದ್ದಾರೆ. ಆದರೆ ಜಾಗ ಇಲ್ಲ, ಜಾಗ ಬೇಕಂದ್ರೆ ಇಪ್ಪತ್ತು ಲಕ್ಷ ರೂಪಾಯಿ ಬೇಕು, ಎಲ್ಲಿಂದ ತರಲಿ? ಎಂದು ಕೋತಿರಾಜ್ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಜೋಗದಲ್ಲಿ ಜ್ಯೋತಿರಾಜ್‌ ಬಯೋಪಿಕ್‌ ಶೂಟಿಂಗ್‌: ಜೀವರಕ್ಷಕವಿಲ್ಲದೆ 'ಮಂಕಿ ಮ್ಯಾನ್' ಸಾಹಸ

Last Updated : Oct 21, 2024, 10:35 PM IST

ABOUT THE AUTHOR

...view details